ಬೆಂಗಳೂರು: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಟ್ರೋಫಿಗೆ ಮುತ್ತಿಕ್ಕಿದೆ.
ಈ ಮೂಲಕ ಭಾರತ ತಂಡ ದಾಖಲೆಯ 3ನೇ ಚಾಂಪಿಯನ್ಸ್ ಟ್ರೋಫಿ ಕಿರೀಟ ತೊಟ್ಟಿದೆ. ಈ ಜಯದೊಂದಿಗೆ 2000ರ ಚಾಂಪಿಯನ್ಸ್ ಫೈನಲ್ ಸೋಲಿಗೆ 25 ವರ್ಷಗಳ ನಂತರ ಸೇಡು ತೀರಿಸಿಕೊಂಡಿದೆ. 2002, 2013ರಲ್ಲಿ ಟ್ರೋಫಿ ಎತ್ತಿ ಹಿಡಿದ್ದಿದ್ದ ಭಾರತ ಇದೀಗ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಬರ ನೀಗಿಸಿಕೊಂಡಿದೆ.
2017ರಲ್ಲಿ ಪಾಕಿಸ್ತಾನ ವಿರುದ್ಧ ಸೋತು ರನ್ನರ್ ಅಪ್ ಆಗಿದ್ದ ಭಾರತ ತಂಡ, 2024ರ ವಿಶ್ವಕಪ್ ನಂತರ ಸತತ 2ನೇ ಐಸಿಸಿ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಈ ಬಾರಿ ಗೆಲುವು ಸಾಧಿಸುವುದರ ಮೂಲಕ ಅಜೇಯ ಗೆಲುವು ದಾಖಲಿಸಿದೆ.
ತವರಿನಲ್ಲಿ 2023ರ ಏಕದಿನ ವಿಶ್ವಕಪ್ ಸೋತು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಟೀಮ್ ಇಂಡಿಯಾ, ಸತತ 2 ಟ್ರೋಫಿ ಗೆದ್ದು ಸಮಾಧಾನಪಡಿಸಿದೆ. ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಇನ್ನೇನಿಲ್ಲ. ಕಿವೀಸ್ ನೀಡಿದ್ದ 252 ರನ್ಗಳ ಗುರಿ ಬೆನ್ನಟ್ಟಿದ ರೋಹಿತ್ ಪಡೆ, 49 ಓವರ್ಗಳಲ್ಲಿ ಗುರಿ ಮುಟ್ಟಿದೆ. ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದ ಎಂಎಸ್ ಧೋನಿ ಬಳಿಕ ಎರಡೂ ಪ್ರಶಸ್ತಿಗಳನ್ನು ಗೆದ್ದ ವಿಶ್ವದ 2ನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಗಂಗೂಲಿ, ಧೋನಿ ಬಳಿಕ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಭಾರತದ 3ನೇ ನಾಯಕ ರೋಹಿತ್ ಶರ್ಮಾ ಆಗಿದ್ದಾರೆ.
ಭಾರತದ ಭರ್ಜರಿ ಹೋರಾಟ
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಿತು. ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್ಗೆ 57 ರನ್ ಕಲೆ ಹಾಕಿದರು. ಈ ಜೋಡಿಯನ್ನು ವರುಣ್ ಚಕ್ರವರ್ತಿ ಮುರಿದರು. ಪರಿಣಾಮ ಯಂಗ್ 15ಕ್ಕೆ ಆಟ ಮುಗಿಸಿದರು. 2 ಜೀವದಾನ ಪಡೆದಿದ್ದ ರಚಿನ್ ರವೀಂದ್ರ 37 ರನ್ ಗಳಿಸಿದ್ದಾಗ ಕುಲ್ದೀಪ್ ಯಾದವ್ ಗೂಗ್ಲಿ ಎಸೆತಕ್ಕೆ ಕ್ಲೀನ್ ಬೋಲ್ಡ್ ಆದರು. ಕುಲ್ದೀಪ್ ಎಸೆದ ತನ್ನ ಎರಡನೇ ಓವರ್ನಲ್ಲೇ ಕೇನ್ ವಿಲಿಯಮ್ಸನ್ (14) ಸುಲಭ ಕ್ಯಾಚ್ ಕೊಟ್ಟರು. ಟಾಮ್ ಲಾಥಮ್ (14) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರೊಂದಿಗೆ ಕಿವೀಸ್ ಮೇಲೆ ಭಾರತದ ಸ್ಪಿನ್ನರ್ಗಳ ಹಿಡಿತ ಸಾಧಿಸಿದರು.
ಈ ಹಂತದಲ್ಲಿ ಡ್ಯಾರಿಲ್ ಮಿಚೆಲ್ ಮತ್ತು ಮೈಕಲ್ ಬ್ರೇಸ್ವೆಲ್ ಮಿಂಚಿದರು. ಇಬ್ಬರು ಸಹ ಆಕರ್ಷಕ ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದರು. ಹೀಗಾಗಿ ತಂಡದ ಮೊತ್ತ 200ರ ಗಡಿ ದಾಟುವಂತಾಯಿತು. ಆರಂಭದಲ್ಲಿ ಮೇಲುಗೈ ಸಾಧಿಸಿದ ಸ್ಪಿನ್ನರ್ಗಳು ಮಧ್ಯಮ ಓವರ್ಗಳಲ್ಲಿ ಕೊಂಚ ರನ್ ಲೀಕ್ ಮಾಡಿದರು. ಮಿಚೆಲ್ 101 ಎಸೆತಗಳಲ್ಲಿ 3 ಬೌಂಡರಿ 63 ರನ್ ಗಳಿಸಿದ್ದಾರೆ. ಮೈಕಲ್ ಬ್ರೇಸ್ವೆಲ್ 40 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ 53 ರನ್ ಗಳಿಸಿ ತಂಡದ ಗಡಿ 250ರ ಗಡಿ ದಾಟಿಸಿದರು. ಜೊತೆಗೆ ಗ್ಲೆನ್ ಫಿಲಿಪ್ಸ್ ಸಹ ಅಮೋಘ 34 ರನ್ಗಳ ಕಾಣಿಕೆ ನೀಡಿದರು.
1998-2025ರ ವರೆಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಗಳು ಯಾವುವು?
ಗೆದ್ದವರು (ಸೋತವರು)
1998 – ದಕ್ಷಿಣ ಆಫ್ರಿಕಾ (ವೆಸ್ಟ್ ಇಂಡೀಸ್)
2000- ನ್ಯೂಜಿಲೆಂಡ್ (ಭಾರತ)
2002 – ಭಾರತ – ಶ್ರೀಲಂಕಾ (ಜಂಟಿ ಚಾಂಪಿಯನ್)
2004 – ವೆಸ್ಟ್ ಇಂಡೀಸ್ (ಇಂಗ್ಲೆಂಡ್)
2006 – ಆಸ್ಟ್ರೇಲಿಯಾ (ವೆಸ್ಟ್ ಇಂಡೀಸ್)
2009 – ಆಸ್ಟ್ರೇಲಿಯಾ (ನ್ಯೂಜಿಲೆಂಡ್)
2013 – ಭಾರತ (ಇಂಗ್ಲೆಂಡ್)
2017 – ಪಾಕಿಸ್ತಾನ (ಭಾರತ)
2025 – ಭಾರತ (ನ್ಯೂಜಿಲೆಂಡ್)
ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದ ನಾಯಕರು
ಹ್ಯಾನ್ಸಿ ಕ್ರೋನಿಯೆ – ದಕ್ಷಿಣ ಆಫ್ರಿಕಾ (1998)
ಸ್ಟೀಫನ್ ಫ್ಲೆಮಿಂಗ್ – ನ್ಯೂಜಿಲೆಂಡ್ (2000)
ಸೌರವ್ ಗಂಗೂಲಿ (ಭಾರತ), ಸನತ್ ಜಯಸೂರ್ಯ (ಶ್ರೀಲಂಕಾ) – (ಜಂಟಿ ಚಾಂಪಿಯನ್) – 2002
ಬ್ರಿಯಾನ್ ಲಾರಾ – ವೆಸ್ಟ್ ಇಂಡೀಸ್ (2004)
ರಿಕಿ ಪಾಂಟಿಂಗ್ – ಆಸ್ಟ್ರೇಲಿಯಾ (2006)
ರಿಕಿ ಪಾಂಟಿಂಗ್ – ಆಸ್ಟ್ರೇಲಿಯಾ (2009)
ಎಂಎಸ್ ಧೋನಿ – ಭಾರತ (2013)
ಸರ್ಫರಾಜ್ ಅಹ್ಮದ್ – ಪಾಕಿಸ್ತಾನ (2017)
ರೋಹಿತ್ ಶರ್ಮಾ – ಭಾರತ (2025)



















