ಪಹಲ್ಗಾಮ್ ಪ್ರತಿಕಾರದ ಚಿಂಗಾರಿ ಇದೀಗ ಸುನಾಮಿಗಿಂತ ಹೆಚ್ಚು ದೊಡ್ಡದಾಗಿ ಅಬ್ಬರಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳ 9 ತಾಣಗಳನ್ನು ಭೂಪಟದಿಂದಲೇ ನಿರ್ನಾಮ ಮಾಡಿದೆ ಭಾರತ.
ಹಾಗಂತ ಈ ತಾಣಗಳನ್ನೇ ಭಾರತ ಟಾರ್ಗೆಟ್ ಮಾಡಿದ್ದೇಕೆ? ಹೌದು, ಮುರುಡ್ಕೆ, ಪಾಕಿಸ್ತಾನದ ಪುಟ್ಟ ನಗರ. ಲಾಹೋರ್ ಗೆ ಸನಿಹದಲ್ಲಿರುವ ಈ ನಗರವೇ ಉಗ್ರರ ಹಾಟ್ ಫೇವರಿಟ್. ಭಾರತದ ವಿರುದ್ಧ ಮಚ್ಚು ಮಸಿಯುತ್ತಲೇ ಇದ್ದ ಲಷ್ಕರ್ ಮತ್ತು ಜೈಶ್ ಸಂಘಟನೆಗಳ ನಟೋರಿಯಸ್ ಜಿಹಾದಿಗಳದ್ದೆಲ್ಲಾ ಇಲ್ಲೇ ವಾಸ್ತವ್ಯ. ದೆಹಲಿಯಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಮುರುಡ್ಕೆ ಭಾರತದ ಮೊದಲ ಟಾರ್ಗೆಟ್ ಆಗಿತ್ತು. ಇನ್ನು ಎರಡನೇ ಟಾರ್ಗೆಟ್ ಆಗಿದ್ದ ಬಹಾವಲ್ಪುರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪ್ರಸಿದ್ಧ ನಗರ.
ಇಲ್ಲೇ ಜೈಶ್ ಮತ್ತು ಲಷ್ಕರ್ ನ ಬಹುತೇಕ ಟ್ರೈನಿಂಗ್ ಕ್ಯಾಂಪ್ ಗಳಿವೆ. ಭಾರತದಲ್ಲಿ ನಡೆದ ಎಲ್ಲ ಉಗ್ರ ಕೃತ್ಯಗಳಲ್ಲಿ ಭಾಗಿಯಾದವರು ಪಳಗಿದ್ದು ಇಲ್ಲೇ. ದೆಹಲಿಯಿಂದ ಬರೋಬ್ಬರಿ 600 ಕಿಲೋಮೀಟರ್ ದೂರದಲ್ಲಿದೆ ಈ ಬಹಾವಲ್ಪುರ. ಮೂರನೇ ಟಾರ್ಗೆಟ್ ಆಗಿದ್ದ ಕೋಟ್ಲಿ ದೆಹಲಿಯಿಂದ 550 ಕಿಲೋಮೀಟರ್ ದೂರದಲ್ಲಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರೋ ಈ ಕೋಟ್ಲಿ, ದೈತ್ಯ ಪರ್ವತಗಳಿಂದ ಆವೃತವಾದ ತಾಣ. ಹೀಗಾಗಿ ಭಾರತದಲ್ಲಿ ದುಷ್ಕೃತ್ಯವೆಸಗಿದ ಬಳಿಕ ಇದೇ ಕೋಟ್ಲಿಯಲ್ಲೇ ಜಿಹಾದಿಗಳು ತಲೆ ಮರೆಸಿಕೊಳ್ಳುತ್ತಿದ್ದರು. ಇನ್ನು ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಈ ಮುಜಾಫರಾಬಾದ್. ದೆಹಲಿಯಿಂದ 700 ಕಿಲೋಮೀಟರ್ ದೂರದಲ್ಲಿರುವ ಮುಜಾಫರಬಾದ್, ಗಡಿ ನಿಯಂತ್ರಣ ರೇಖೆಗೆ ಹತ್ತಿರವಿರುವ ನಗರ. ಹೀಗಾಗಿಯೇ ಜಮ್ಮು-ಕಾಶ್ಮೀರದ ರಜೌರಿ, ಪೂಂಚ್ ಗೆ ಒಳನುಸುಳೋ ಉಗ್ರರು ಇಲ್ಲಿಂದಲೇ ಸಮಯ ಸಾಧಿಸಿ ಯೋಧರ ಕಣ್ತಪ್ಪಿಸಿ ಭಾರತದಲ್ಲಿ ರಕ್ತದೋಕುಳಿ ಆಡ್ತಿದ್ದಾರೆ.



















