ನವದೆಹಲಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮ ಸಂಬಂಧ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಬೆಂಬಲಿಗರು ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಿ ಮೋದಿ ಅವರ ನಿವಾಸದ ಎದುರು ಧರಣಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರೊಂದಿಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪ ಸೇರಿದಂತೆ ಕಾಂಗ್ರೆಸ್‌ನ ಇತರ ನಾಯಕರು ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಗಳ ಅಧಿಕೃತ ನಿವಾಸದ ಎದುರು ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ʻನಿನ್ನೆ ಯುವ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸರ ಕ್ರೂರ ವರ್ತನೆ, ದೌರ್ಜನ್ಯಕ್ಕೆ ಪ್ರಧಾನಿ ಮೋದಿ ಅವರಿಂದ ಉತ್ತರ ಕೇಳಲು ನಾವಿಲ್ಲಿಗೆ ಬಂದಿದ್ದೇವೆ. ದೇಶದ ಯುವಜನರ ಭವಿಷ್ಯ ಹಾಳು ಮಾಡಿದ ಕಾರಣ ಪ್ರಧಾನಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕುʼ ಎಂದು ಆಗ್ರಹಿಸಿದ್ದಾರೆ.
ಇನ್ನೂ ಪ್ರಧಾನಮಂತ್ರಿಯವರ ನಿವಾಸವು ಭದ್ರತಾ ವಲಯವಾಗಿರುವ ಹಿನ್ನೆಲೆ, ಧರಣಿ ಅಂತ್ಯಗೊಳಿಸುವಂತೆ ಪೊಲೀಸರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು. ಆದ್ರೆ ಪೊಲೀಸರ ಮನವಿಗೆ ಒಪ್ಪದ ಹಿನ್ನೆಲೆ ರಾಹುಲ್ ಗಾಂಧಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಿನಿ ತಾರೆಯರ ಬಲ : ‘ಜನರ ದನಿಯೇ ದೇವರ ದನಿ’ ಎಂದ ನಟ-ನಟಿಯರು!


















