ನವದೆಹಲಿ: ನೇಪಾಳದಲ್ಲಿ ಭಾರಿ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಭಾರತದ ಹಲವೆಡೆಯೂ ಭೂಮಿ ಕಂಪಿಸಿದೆ. ಶುಕ್ರವಾರ ಬೆಳಗ್ಗೆ ಹಿಮಾಲಯ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಿಕ್ಟರ್ ಮಾಪನದ ಮೂಲಕ ತಿಳಿದುಬಂದಿದೆ. ಇದರಿಂದಾಗಿ ಬಿಹಾರದ ಪಟನಾ ಹಾಗೂ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಭೂಕಂಪ ಸಂಭವಿಸಿದೆ.
ಬೆಳಗಿನ ಜಾವ 2.35ರ ಸುಮಾರಿಗೆ ನೇಪಾಳದ ಸುಂಧುಪಾಲ್ಚಕ್ ಜಿಲ್ಲೆ ಬೈರವ ಕುಂಡ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಬೆಳಗಿನ ಜಾವ ನಿದ್ದೆಯ ಮಂಪರಿನಲ್ಲಿದ್ದ ಜನ ದಿಗಿಲಾಗಿ ಮನೆಯಿಂದ ಓಡಿಬಂದರು ಎಂದು ತಿಳಿದುಬಂದಿದೆ. ಭೂಕಂಪದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ನೇಪಾಳದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನೇಪಾಳದಲ್ಲಿ ಭೂಮಿ ನಲುಗಿದ ಕಾರಣ ಕಟ್ಟಡಗಳು ಕುಸಿದು ಬೀಳದಿದ್ದರು, ನೂರಾರು ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ತಿಳಿದುಬಂದಿದೆ. ಇನ್ನು, ಪಟನಾ ಹಾಗೂ ಸಿಲುಗಿರಿಯಲ್ಲಿ ಭೂಮಿ ಕಂಪಿಸಿದರೂ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ. ಭಯಭೀತರಾದ ಜನ ಮನೆಯಿಂದ ಹೊರಗೆ ಬಂದು ನಿಂತಿದ್ದರು. ಇದರಿಂ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಕಳೆದ ತಿಂಗಳು ಟಿಬೆಟ್ ಸೇರಿ ಹಿಮಾಲಯ ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿತ್ತು. ಸುಮಾರು 7.1 ತೀವ್ರತೆಯ ಭೂಕಂಪ ಸಂಭವಿಸಿದ ಕಾರಣ 125ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ನೂರಾರು ಜನ ಗಾಯಗೊಂಡಿದ್ದರು.



















