ಬೆಂಗಳೂರು : ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಹಾಗೂ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಕ್ರಿಕೆಟ್ ಬದುಕಿಗೆ ಮತ್ತೊಂದು ದೊಡ್ಡ ವಿಘ್ನ ಎದುರಾಗಿದೆ. ಪಾನಮತ್ತರಾಗಿ ವಾಹನ ಚಲಾಯಿಸಿದ ಆರೋಪದ ಮೇಲೆ ಸಿಡ್ನಿಯ ನ್ಯಾಯಾಲಯದಲ್ಲಿ ವಾರ್ನರ್ ಪರ ವಕೀಲರು ತಪ್ಪೊಪ್ಪಿಕೊಂಡಿದ್ದು, ಈ ಪ್ರಕರಣದಿಂದಾಗಿ ಅವರು ಜೈಲು ಶಿಕ್ಷೆ ಎದುರಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಬೃಹತ್ ಟಿ-20 ಟೂರ್ನಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ (ಬಿಬಿಎಲ್) ‘ಸಿಡ್ನಿ ಥಂಡರ್’ ತಂಡದ ನಾಯಕತ್ವವನ್ನೂ ಕಳೆದುಕೊಳ್ಳುವ ಗಂಭೀರ ಭೀತಿ ಎದುರಾಗಿದೆ.
ಈಸ್ಟರ್ ಭಾನುವಾರದಂದು (ಏಪ್ರಿಲ್ 5) ಸಿಡ್ನಿಯ ಮರೌಬ್ರಾ ಉಪನಗರದಲ್ಲಿ ಪೊಲೀಸರು ಬ್ರೀತ್-ಟೆಸ್ಟಿಂಗ್ (ಉಸಿರಾಟದ ಪರೀಕ್ಷೆ) ನಡೆಸುತ್ತಿದ್ದಾಗ ವಾರ್ನರ್ ಅವರ ವಾಹನವನ್ನು ತಡೆದು ತಪಾಸಣೆ ನಡೆಸಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಡೆಸಿದ ಎರಡನೇ ಹಂತದ ಪರೀಕ್ಷೆಯಲ್ಲಿ ಅವರ ರಕ್ತದಲ್ಲಿ ಮದ್ಯಸಾರದ ಪ್ರಮಾಣ (BAC) ಶೇಕಡಾ 0.104 ರಷ್ಟಿರುವುದು ದೃಢಪಟ್ಟಿತ್ತು.
ಇದು ಆಸ್ಟ್ರೇಲಿಯಾದ ಕಾನೂನಿನ ಅನುಮತಿತ ಮಿತಿಯಾದ 0.05 ಗಿಂತ ದುಪ್ಪಟ್ಟು ಹೆಚ್ಚಾಗಿತ್ತು. ಬುಧವಾರ ಸಿಡ್ನಿಯ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ವಾರ್ನರ್ ಗೈರುಹಾಜರಾಗಿದ್ದರು. ಆದರೆ ಅವರ ಪರವಾಗಿ ವಕೀಲ ಬಾಬಿ ಹಿಲ್ ಹಾಜರಾಗಿ ಅಧಿಕೃತವಾಗಿ ತಪ್ಪೊಪ್ಪಿಗೆಯನ್ನು ದಾಖಲಿಸಿದ್ದಾರೆ. ನ್ಯಾಯಾಲಯದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಲ್, ತಮ್ಮ ಸ್ನೇಹಿತನ ಮನೆಯಲ್ಲಿ ಮೂರು ಗ್ಲಾಸ್ ವೈನ್ ಕುಡಿದು ವಾಹನ ಚಲಾಯಿಸುವಂತಹ ಅಜಾಗರೂಕ ಹಾಗೂ ಮೂರ್ಖತನದ ನಿರ್ಧಾರ ತೆಗೆದುಕೊಂಡಿದ್ದಕ್ಕೆ ವಾರ್ನರ್ ಸಂಪೂರ್ಣ ಹೊಣೆ ಹೊತ್ತಿದ್ದಾರೆ ಹಾಗೂ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಕಾದಿದೆಯಾ ಕಠಿಣ ಶಿಕ್ಷೆ?
ನ್ಯೂ ಸೌತ್ ವೇಲ್ಸ್ (NSW) ಕಾನೂನಿನ ಪ್ರಕಾರ, ಮೊದಲ ಬಾರಿಗೆ ಇಂತಹ ‘ಮಿಡ್-ರೇಂಜ್ ಕುಡಿದು ವಾಹನ ಚಲಾಯಿಸಿದ’ ಅಪರಾಧ ಸಾಬೀತಾದರೆ ಗರಿಷ್ಠ ಒಂಬತ್ತು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇದರ ಜೊತೆಗೆ 2,200 ಆಸ್ಟ್ರೇಲಿಯನ್ ಡಾಲರ್‌ಗಳವರೆಗೆ ದಂಡ ಹಾಗೂ ಆರು ತಿಂಗಳಿಂದ ಒಂದು ವರ್ಷದವರೆಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಕಠಿಣ ಕ್ರಮಗಳು ಸೇರಿವೆ. ಪ್ರಕರಣದ ಅಂತಿಮ ತೀರ್ಪು ಹಾಗೂ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಆಗಸ್ಟ್ 18ರಂದು ಪ್ರಕಟಿಸಲಿದೆ. ವಾರ್ನರ್ ಪರ ವಕೀಲರು ಕನಿಷ್ಠ ಶಿಕ್ಷೆಗಾಗಿ ಮನವಿ ಸಲ್ಲಿಸಿದ್ದರೂ, ನ್ಯಾಯಾಲಯದ ತೀರ್ಪು ವಾರ್ನರ್ ಭವಿಷ್ಯವನ್ನು ನಿರ್ಧರಿಸಲಿದೆ.
ಸಿಡ್ನಿ ಥಂಡರ್ ನಾಯಕತ್ವಕ್ಕೆ ಕುತ್ತು
ಈ ದುರ್ಘಟನೆಯು ಕೇವಲ ಕಾನೂನಾತ್ಮಕವಾಗಿ ಮಾತ್ರವಲ್ಲದೆ, ವಾರ್ನರ್ ಅವರ ಕ್ರೀಡಾ ಬದುಕಿನ ಮೇಲೂ ತೀವ್ರ ಪರಿಣಾಮ ಬೀರಲಿದೆ. ಕ್ರಿಕೆಟ್ ನ್ಯೂ ಸೌತ್ ವೇಲ್ಸ್ (ಸಿಎನ್‌ಎಸ್‌ಡಬ್ಲ್ಯೂ) ಸಂಸ್ಥೆಯು ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲು ನ್ಯೂ ಸೌತ್ ವೇಲ್ಸ್ ಸರ್ಕಾರದೊಂದಿಗೆ ವಾಣಿಜ್ಯ ಮತ್ತು ಸಮುದಾಯ ಪಾಲುದಾರಿಕೆಯನ್ನು ಹೊಂದಿದೆ. ಹೀಗಿರುವಾಗ ಅದೇ ಸಂಸ್ಥೆಗೆ ಸೇರಿದ ತಂಡದ ನಾಯಕನೇ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿರುವುದು ಸಂಸ್ಥೆಗೆ ತೀವ್ರ ಮುಜುಗರ ತಂದಿದೆ. ಕ್ರಿಕೆಟ್ ನ್ಯೂ ಸೌತ್ ವೇಲ್ಸ್ ಮುಖ್ಯ ಕಾರ್ಯನಿರ್ವಾಹಕ ಲೀ ಜರ್ಮನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಆರೋಪಗಳು ಅತ್ಯಂತ ಕಳವಳಕಾರಿಯಾಗಿವೆ ಮತ್ತು ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ನಾವು ಸುರಕ್ಷಿತ ಚಾಲನೆಯ ಪರವಾಗಿದ್ದೇವೆಯೇ ಹೊರತು ಪಾನಮತ್ತ ಚಾಲನೆಯ ಪರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಯಕತ್ವದ ಕಂಟಕಕ್ಕೆ ಹಳೆಯ ಕಳಂಕದ ನೆರಳು
ವಾರ್ನರ್ ಪಾಲಿಗೆ ನಾಯಕತ್ವದ ಸ್ಥಾನವು ಮೊದಲಿನಿಂದಲೂ ಸವಾಲಿನದ್ದೇ ಆಗಿದೆ. 2018ರ ಕೇಪ್ ಟೌನ್ ಚೆಂಡು ವಿರೂಪ ಪ್ರಕರಣದ ನಂತರ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಯು ಅವರ ಮೇಲೆ ನಾಯಕತ್ವ ವಹಿಸದಂತೆ ಆಜೀವ ನಿಷೇಧ ಹೇರಿತ್ತು. ತೀರಾ ಇತ್ತೀಚೆಗೆ, 2024ರ ಅಂತ್ಯದ ವೇಳೆಗೆ ಅವರ ನಿಷೇಧವನ್ನು ಹಿಂಪಡೆದು ನಾಯಕತ್ವ ವಹಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆ ಮೂಲಕ ಅವರು ಸಿಡ್ನಿ ಥಂಡರ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಆದರೆ ಇದೀಗ ಮತ್ತೆ ಕಾನೂನು ಮತ್ತು ಶಿಸ್ತು ಉಲ್ಲಂಘಿಸಿರುವ ಕಾರಣ ಅವರ ನಾಯಕತ್ವದ ಸ್ಥಾನವು ಕತ್ತಲಲ್ಲಿ ಸಿಲುಕಿದೆ. ಮುಂದಿನ ತಿಂಗಳು ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಕ್ರಿಕೆಟ್ ನ್ಯೂ ಸೌತ್ ವೇಲ್ಸ್ ಮತ್ತು ಸಿಡ್ನಿ ಥಂಡರ್ ಅಧಿಕಾರಿಗಳು ಸಭೆ ಸೇರಿ ವಾರ್ನರ್ ಅವರನ್ನು ನಾಯಕತ್ವದಲ್ಲಿ ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.
ಇದನ್ನೂ ಓದಿ : ಅನುಮಾನಗಳಿದ್ದಾಗಲೆಲ್ಲ ಆಶಿಶ್ ನೆಹ್ರಾ ಅವರನ್ನೇ ಕೇಳುತ್ತೇನೆ : ಯುವ ವೇಗಿ ಅಶೋಕ್ ಶರ್ಮಾ


















