ಹೊಸಕೋಟೆ: ಆಶ್ರಯ ಯೋಜನೆಯಡಿ ಮಂಜೂರಾಗಿದ್ದ ಜಮೀನಿನ ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ಉಂಟಾದ ಗಲಾಟೆಯ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ 25 ವರ್ಷದ ಯುವಕನೊಬ್ಬ ಗುಂಡೇಟಿಗೆ ಬಲಿಯಾದ ಘಟನೆ ತಾಲೂಕಿನ ಸೋಲೂರು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.ಮೃತ ಯುವಕನನ್ನು ಸೋಲೂರು ಗ್ರಾಮದ ನಿವಾಸಿ ಲಿಖಿತ್ ಗೌಡ (25) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ರಮೇಶ್ ಎಂಬಾತನನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ವಿವಾದ
ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಸರ್ಕಾರವು ಆಶ್ರಯ ಯೋಜನೆಯಡಿ ಸೋಲೂರು ಗ್ರಾಮದಲ್ಲಿ 3 ಎಕರೆ 25 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು. ಆದರೆ, ಈ ಜಮೀನಿಗೆ ಹೊಂದಿಕೊಂಡಂತಿದ್ದ ಸುಮಾರು 10 ಗುಂಟೆ ಪ್ರದೇಶವನ್ನು ಆರೋಪಿ ರಮೇಶ್ ಒತ್ತುವರಿ ಮಾಡಿಕೊಂಡಿದ್ದ ಎನ್ನಲಾಗಿದೆ.ಈ ಕುರಿತು ಕಳೆದ ಒಂದು ವಾರದ ಹಿಂದೆಯಷ್ಟೇ ರಮೇಶ್ ಸಮ್ಮುಖದಲ್ಲೇ ಅಧಿಕಾರಿಗಳು ಜಮೀನಿನ ಸರ್ವೇ ಕಾರ್ಯ ನಡೆಸಿ, ಅಳತೆ ಮಾಡಿ ಗಡಿ ಕಲ್ಲುಗಳನ್ನು ನೆಟ್ಟಿದ್ದರು. ಆ ಸಂದರ್ಭದಲ್ಲಿ ರಮೇಶ್ ಕೂಡ ಗಡಿ ಗುರುತಿಗೆ ಒಪ್ಪಿಗೆ ಸೂಚಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೆರವು ಕಾರ್ಯಾಚರಣೆ ವೇಳೆ ಗಲಾಟೆ
ಶುಕ್ರವಾರ ಬೆಳಿಗ್ಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗರಾಜು ಸೇರಿದಂತೆ ಸುಮಾರು 10 ಮಂದಿ ಸ್ಥಳೀಯರು ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಆಗಮಿಸಿ, ನಿವೇಶನ ಹಂಚಿಕೆಗಾಗಿ ಜಮೀನು ಸ್ವಚ್ಛಗೊಳಿಸುವ ಮತ್ತು ಸಮತಟ್ಟು ಮಾಡುವ ಕಾರ್ಯ ಆರಂಭಿಸಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಪರವಾನಗಿ ಪಡೆದಿದ್ದ ಡಬಲ್ ಬ್ಯಾರೆಲ್ ಬಂದೂಕಿನೊಂದಿಗೆ ಸ್ಥಳಕ್ಕೆ ಬಂದ ರಮೇಶ್, ಜಮೀನು ಸಮತಟ್ಟು ಮಾಡುವ ಕೆಲಸಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾನೆ.ಸರ್ವೇ ಕಾರ್ಯಕ್ಕೆ ನೀವೇ ಒಪ್ಪಿಗೆ ಸೂಚಿಸಿದ್ದೀರಿ ಮತ್ತು ಬಡವರಿಗೆ ನಿವೇಶನ ಹಂಚಲು ಈ ಕೆಲಸ ಮಾಡಲಾಗುತ್ತಿದೆ ಎಂದು ಸ್ಥಳೀಯರು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಇದಕ್ಕೆ ಜಗ್ಗದ ಆರೋಪಿ ರಮೇಶ್ ಏಕಾಏಕಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಬೆದರಿಕೆ ಹಾಕಿದ್ದಾನೆ.
ಮನೆಯ ಕಿಟಕಿಯಿಂದ ಗುಂಡಿನ ದಾಳಿ
ಗಾಳಿಯಲ್ಲಿ ಗುಂಡು ಹಾರಿಸಿದ ಬಳಿಕ ರಮೇಶ್ ಅಲ್ಲಿಂದ ಓಡಿಹೋಗಿ, ಸುಮಾರು 50 ಮೀಟರ್ ದೂರದಲ್ಲಿದ್ದ ಮನೆಯೊಂದರಲ್ಲಿ ಅಡಗಿಕೊಂಡಿದ್ದಾನೆ. ಇದೇ ವೇಳೆ, ತಮ್ಮ ಮನೆಯ ಮುಂಭಾಗದಲ್ಲಿ ನಿಂತಿದ್ದ ಲಿಖಿತ್ ಗೌಡ ಈ ಗಲಾಟೆಯ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದರು.ಇದನ್ನು ಗಮನಿಸಿದ ಆರೋಪಿ ರಮೇಶ್, ತಾನು ಅಡಗಿದ್ದ ಮನೆಯ ಕಿಟಕಿಯ ಮೂಲಕ ಲಿಖಿತ್ ಗೌಡ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಲಿಖಿತ್ ಅವರ ಹೊಟ್ಟೆಯ ಮೇಲ್ಭಾಗಕ್ಕೆ ತಗುಲಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಇಬ್ಬರಿಗೆ ಗಾಯ, ಆರೋಪಿ ಬಂಧನ
ಘಟನೆಯ ವೇಳೆ ಆರೋಪಿಯನ್ನು ತಡೆಯಲು ಮುಂದಾದ ಭರತ್ ಎಂಬುವವರು ಬಂದೂಕಿನ ನಳಿಕೆಯನ್ನು ಹಿಡಿಯಲು ಯತ್ನಿಸಿದಾಗ ಅವರ ಕೈಗೆ ಗಾಯವಾಗಿದೆ. ಸ್ಥಳದಲ್ಲಿದ್ದ ಕೆಂಪರಾಜು ಎಂಬುವವರ ಕೆನ್ನೆಯ ಮೇಲ್ಭಾಗಕ್ಕೆ ಗುಂಡು ತಗುಲಿ ಸವರಿಕೊಂಡು ಹೋಗಿದ್ದು, ಗಾಯಗೊಂಡಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಚಂದ್ರಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಮೇಶ್ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ದೃಢಪಡಿಸಿದ್ದಾರೆ.


















