ಬೆಂಗಳೂರು: ಇತ್ತೀಚೆಗಷ್ಟೇ ಮದುವೆಯಾದವರು, ರೇಷನ್ ಕಾರ್ಡ್ ಇಲ್ಲದವರು, ಕೂಡು ಕುಟುಂಬದಿಂದ ಬೇರೆಯಾದವರಿಗೆ ರಾಜ್ಯ ಸರ್ಕಾರ ಶುಭ ಸಮಾಚಾರ ನೀಡಿದೆ. ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ರೇಷನ್ ಕಾರ್ಡ್ ಎಂಬುದು ಪಡಿತರ ಪಡೆಯುವ ದಾಖಲೆ ಮಾತ್ರವಲ್ಲ. ಇದು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕೂಡ ಪ್ರಮುಖ ದಾಖಲೆಯಾಗಿರುವುದರಿಂದ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಇಚ್ಛಿಸುವವರು ಆನ್ ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬಹುದು.
ಯಾವೆಲ್ಲ ದಾಖಲೆ ಬೇಕು?
ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಕುಟುಂಬದ ಮುಖ್ಯಸ್ಥರ ಪಾಸ್ ಪೋರ್ಟ್ ಸೈಜಿನ ಫೋಟೋಗಳನ್ನು ಲಗತ್ತಿಸುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
• ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ahara.kar.nic.in ಗೆ ಭೇಟಿ ನೀಡಿ.
• ಹೋಮ್ ಪೇಜ್ ನಲ್ಲಿರುವ ‘e-Services’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ‘ಹೊಸ ಪಡಿತರ ಚೀಟಿ’ (New Ration Card) ಆಯ್ಕೆ ಮಾಡಿ.
• ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್, ಯಾವ ಕಾರ್ಡ್ ಪಡೆಯುತ್ತೀರೋ ಅದನ್ನು ದೃಢೀಕರಿಸಿ
• ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, ನಂತರ ಬರುವ ಒಟಿಪಿಯನ್ನು ನಮೂದಿಸಿ.
• ಕುಟುಂಬದ ಸದಸ್ಯರ ವಿವರಗಳು, ವಿಳಾಸ ಮತ್ತು ವಾರ್ಷಿಕ ಆದಾಯದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
• ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿದ ಬಳಿಕ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
• ಅರ್ಜಿ ಸಲ್ಲಿಸಿದ ನಂತರ ಲಭಿಸುವ ‘Acknowledgement Number’ ಅನ್ನು ಬರೆದಿಟ್ಟುಕೊಳ್ಳಿ


















