ಬೆಂಗಳೂರು : ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಪರ ತಮ್ಮ ಸಾಮರ್ಥ್ಯವನ್ನು ರೋಹಿತ್ ಶರ್ಮಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆದರೂ ಮುಂಬರುವ 2027ರ ಏಕದಿನ ವಿಶ್ವಕಪ್ ವರೆಗೂ ಅವರು ತಂಡದಲ್ಲಿ ಮುಂದುವರಿಯುತ್ತಾರೆಯೇ ಎಂಬ ಬಗ್ಗೆ ಊಹಾಪೋಹಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇವೆ.
ಈ ಎಲ್ಲಾ ಗೊಂದಲಗಳ ನಡುವೆ, 1983ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ಮದನ್ ಲಾಲ್ ಅವರು ಮಾಜಿ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ. ರೋಹಿತ್ ಉತ್ತಮ ಪ್ರದರ್ಶನ ನೀಡುತ್ತಿರುವವರೆಗೆ ಅವರು ವೃತ್ತಿಜೀವನ ಮುಂದುವರಿಸಬೇಕು ಎಂದು ಅವರು ತಮ್ಮ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ನಂತರ ನಿವೃತ್ತಿ ಘೋಷಿಸಲಿದ್ದಾರೆ ಎಂಬಂತಹ ವರದಿಗಳು ಹರಿದಾಡುತ್ತಿದ್ದವು. ಕೆಲವು ಪಂದ್ಯಗಳಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ್ದ ಅವರನ್ನು ಸಾಕಷ್ಟು ಟೀಕಿಸಲಾಗಿತ್ತು. ಆದರೆ ಲಾರ್ಡ್ಸ್‌ನಲ್ಲಿ ಕೇವಲ 110 ಎಸೆತಗಳಲ್ಲಿ 138 ರನ್ ಚಚ್ಚುವ ಮೂಲಕ ಹಿಟ್‌ಮ್ಯಾನ್ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಈ ಬೆಳವಣಿಗೆಯ ನಡುವೆ ಮಾತನಾಡಿರುವ ಮದನ್ ಲಾಲ್, ಆಟಗಾರನೊಬ್ಬ ನಿರಂತರವಾಗಿ ಫಾರ್ಮ್‌ನಲ್ಲಿದ್ದಾಗ ಆತನ ನಿವೃತ್ತಿಯ ಬಗೆಗಿನ ಚರ್ಚೆಗಳು ಅರ್ಥಹೀನ ಎಂದಿದ್ದಾರೆ. ಕಡಕ್ (KADAK) ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, “ಪ್ರತಿಯೊಬ್ಬ ಆಟಗಾರನೂ ಒಂದಲ್ಲ ಒಂದು ದಿನ ನಿವೃತ್ತಿ ಹೊಂದಲೇಬೇಕು, ಇಂದಲ್ಲ ನಾಳೆ ಮೈದಾನ ಬಿಡಲೇಬೇಕು. ಆದರೆ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಮತ್ತು ಆಡಲು ಇಚ್ಛಿಸುತ್ತಿರುವಾಗ ಜನರು ಸುಮ್ಮನಿರಬೇಕು” ಎಂದು ಹೇಳಿದ್ದಾರೆ.
ಧೈರ್ಯವಿದ್ದರೆ ಯೋಗ್ಯ ಕಾರಣ ನೀಡಿ ಅವರನ್ನು ತಂಡದಿಂದ ಕೈಬಿಡಿ; ಆದರೆ ಭರ್ಜರಿಯಾಗಿ ರನ್ ಗಳಿಸುತ್ತಿರುವ ಆಟಗಾರನ ಬಳಿ ಹೋಗಿ, ‘ನೀವು ನಮ್ಮ ಮುಂದಿನ ಯೋಜನೆಗಳಲ್ಲಿ ಇಲ್ಲ’ ಎಂದು ಹೇಳುವಂತಿಲ್ಲ. “ನಾನು ರನ್ ಗಳಿಸುತ್ತಿದ್ದೇನೆ, ಹಾಗಿದ್ದರೂ ನನ್ನನ್ನು ಯಾಕೆ ಯೋಜನೆಗಳಿಂದ ಕೈಬಿಡುತ್ತಿದ್ದೀರಿ?” ಎಂದು ಕೇಳುವ ಸಂಪೂರ್ಣ ಹಕ್ಕು ರೋಹಿತ್‌ಗೆ ಇದೆ ಎಂದು ಅವರು ವಿವರಿಸಿದರು.
ರೋಹಿತ್‌ರ ವಿಶಿಷ್ಟ ಬ್ಯಾಟಿಂಗ್ ಶೈಲಿಗೆ ಮೆಚ್ಚುಗೆ
ರೋಹಿತ್ ಶರ್ಮಾ ಅವರ ಪ್ರಸ್ತುತ ಫಾರ್ಮ್ ಬಗ್ಗೆ ಮಾತ್ರವಲ್ಲದೆ, ಅವರ ವಿಶಿಷ್ಟ ಬ್ಯಾಟಿಂಗ್ ಕೌಶಲದ ಬಗ್ಗೆಯೂ ಮದನ್ ಲಾಲ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಆಟಗಾರನೂ ತಮ್ಮ ಪ್ರದರ್ಶನದ ಬಗ್ಗೆ ಕಾಳಜಿ ವಹಿಸುತ್ತಾನೆ. ಟೀಮ್ ಇಂಡಿಯಾಕ್ಕೆ ಈಗ ರೋಹಿತ್ ಶರ್ಮಾ ಅವರಂತಹ ಆಟಗಾರನ ಅನಿವಾರ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. “ಅವರು ಆಡುವಂತಹ ಶಾಟ್‌ಗಳು ಮತ್ತು ಅವರ ಬ್ಯಾಟಿಂಗ್ ಶೈಲಿಯನ್ನು ನಮ್ಮ ತಂಡದ ಬೇರೆ ಯಾರೊಬ್ಬರೂ ಮಾಡಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ಅವರಂತೆ ಬ್ಯಾಟ್ ಬೀಸುವಂತಹ ಮತ್ತೊಬ್ಬ ಆಟಗಾರನನ್ನು ನಾನು ನೋಡಿಯೇ ಇಲ್ಲ. ನಮ್ಮಲ್ಲಿ ಅನೇಕ ಶ್ರೇಷ್ಠ ಆಟಗಾರರಿದ್ದಾರೆ, ಆದರೆ ರೋಹಿತ್ ಅವರ ಶೈಲಿಯೇ ವಿಭಿನ್ನ” ಎಂದು ಮಾಜಿ ಆಲ್‌ರೌಂಡರ್ ಕೊಂಡಾಡಿದ್ದಾರೆ.
ಒಬ್ಬ ಆಟಗಾರನೇ ಎಲ್ಲಾ ಪಂದ್ಯಗಳನ್ನು ಗೆಲ್ಲಿಸಲು ಸಾಧ್ಯವಿಲ್ಲ
ಟೀಮ್ ಇಂಡಿಯಾದ ಮಾಜಿ ಮ್ಯಾನೇಜರ್ ಕೂಡ ಆಗಿರುವ ಮದನ್ ಲಾಲ್, ಕ್ರಿಕೆಟ್ ಎನ್ನುವುದು ಒಂದು ಗುಂಪಿನ ಆಟ (ಟೀಮ್ ಗೇಮ್) ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ. ತಂಡ ಸೋತಾಗಲೆಲ್ಲಾ ಕೇವಲ ರೋಹಿತ್ ಅವರನ್ನು ಮಾತ್ರ ಟೀಕಿಸುವುದು ಹಾಗೂ ದೂಷಿಸುವುದು ತಪ್ಪು ಎಂದು ಅವರು ರಕ್ಷಣೆ ನೀಡಿದರು. ಐದು ಪಂದ್ಯಗಳನ್ನು ಆಡಿ ಅದರಲ್ಲಿ ಎರಡು ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲಿಸಿಕೊಟ್ಟರೂ, ಅವರು ಅತ್ಯುತ್ತಮ ಆಟಗಾರನೇ ಎಂದು ಮದನ್ ಲಾಲ್ ವಾದಿಸಿದರು.
ಯಾವುದೇ ಒಬ್ಬನೇ ಆಟಗಾರ ಪ್ರತಿ ಪಂದ್ಯವನ್ನೂ ಗೆಲ್ಲಿಸಿಕೊಡಲು ಅಥವಾ ಯಾವುದೇ ನಾಯಕ ಪ್ರತಿ ಪಂದ್ಯದಲ್ಲೂ ಗೆಲುವು ತಂದುಕೊಡಲು ಸಾಧ್ಯವಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದರು. ಇತ್ತೀಚಿನ ವರದಿಗಳ ಪ್ರಕಾರ, 2026ರಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರು ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿದಂತೆ 42.11 ಸರಾಸರಿಯಲ್ಲಿ ಮತ್ತು 100ರ ಸಮೀಪದ ಸ್ಟ್ರೈಕ್ ರೇಟ್‌ನಲ್ಲಿ 379 ರನ್ ಕಲೆಹಾಕಿದ್ದಾರೆ ಎನ್ನುವುದು ಅವರ ಫಾರ್ಮ್ ಅನ್ನು ಸಾಬೀತುಪಡಿಸುತ್ತದೆ.
ಇದನ್ನೂ ಓದಿ : ಮತ್ತೆ ಹರಾರೆ ಮೈದಾನಕ್ಕೆ ಎಂಟ್ರಿಕೊಟ್ಟ ಸೂರ್ಯವಂಶಿ – ಜಿಂಬಾಬ್ವೆ ವಿರುದ್ಧ ಮಿಂಚಲು ಸಜ್ಜು!



















