ರಾಯಚೂರು : ನಗರದ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ವ್ಯಕ್ತಿಯ ಮೇಲೆ ಖಾರದ ಪುಡಿ ಎರಚಿ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ರಾಜು ಬೊಮ್ಮನಾಳ ಎಂಬಾತ ಮಹಿಳೆಯನ್ನು ಚುಡಾಯಿಸಿ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ, ಸಮೀಪದ ಹೋಟೆಲ್‌ನಿಂದ ಖಾರದ ಪುಡಿ ತಂದು ರಾಜು ಬೊಮ್ಮನಾಳ ಕಣ್ಣಿಗೆ ಎರಚಿದ್ದಾರೆ. ಬಳಿಕ ಕಟ್ಟಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸ್ಥಳದಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಘಟನೆಯ ವೇಳೆ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡುವುದಾಗಿ ಹೇಳಿದ್ದಾರೆ.
ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಘಟನೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು. ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದು, ಬಳಿಕ ಪ್ರಕರಣ ಪೊಲೀಸ್ ಗಮನಕ್ಕೆ ಬಂದಿದೆ. ಸದರಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಂಡಿದ್ದಾರೆ. ಘಟನೆಯ ನಿಖರ ಹಿನ್ನೆಲೆ ಹಾಗೂ ಇಬ್ಬರ ನಡುವಿನ ವಾಗ್ವಾದದ ಕುರಿತು ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಮಂಡ್ಯದಲ್ಲಿ ಒಂದೇ ಕುಟುಂಬದ ಮೂವರು ನಿಗೂಢ ಸಾವು – ಸಾಲ ಬಾಧೆಯೇ ದುರಂತಕ್ಕೆ ಕಾರಣನಾ?



















