ಮಂಡ್ಯ : ಜಿಲ್ಲೆಯ ನೆಹರೂ ನಗರದಲ್ಲಿ ಒಂದೇ ಕುಟುಂಬದ ಮೂವರು ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಹೆಣವಾಗಿರುವ ಘಟನೆ ಬೆಳಕಿಗೆ ಬಂದಿದೆ. ತಂದೆ ಪ್ರಭಾಕರ್, ತಾಯಿ ಜ್ಯೋತಿ ಹಾಗೂ ಮಗ ಸಂತೋಷ್ ಮೃತ ದುರ್ದೈವಿಗಳಾಗಿದ್ದು, ಮೂವರ ಸಾವಿನ ಹಿಂದೆ ಹಲವು ಅನುಮಾನ ಕೂಡ ಮೂಡಿದೆ.
ಸಾಲದ ಬಾಧೆಯಿಂದ ಈ ದುರಂತ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಮಂಡ್ಯ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಾಯಿ ಜ್ಯೋತಿ ಮತ್ತು ಪುತ್ರ ಸಂತೋಷ್ ಅವರ ಮೃತದೇಹಗಳು ಉಸಿರುಗಟ್ಟಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಂದೆ ಪ್ರಭಾಕರ್ ಅವರ ಮೃತದೇಹ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಧ್ಯರಾತ್ರಿಯ ವೇಳೆ ಜ್ಯೋತಿ ಮತ್ತು ಸಂತೋಷ್ ಸಾವನ್ನಪ್ಪಿದ್ದು, ಬಳಿಕ ಬೆಳಿಗ್ಗೆ ಪತ್ನಿ ಮತ್ತು ಮಗನ ಸಾವಿನ ಆಘಾತದಿಂದ ಪ್ರಭಾಕರ್ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಮೂವರ ಸಾವಿನ ನಿಖರ ಕಾರಣ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ದುರಂತದ ಮತ್ತೊಂದು ನೋವಿನ ಸಂಗತಿ ಎಂದರೆ, ಮೃತಪಟ್ಟ ಸಂತೋಷ್ ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎನ್ನಲಾಗಿದೆ. ಹೊಸ ಜೀವನ ಆರಂಭಿಸಿದ್ದ ಯುವಕ ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಘಟನೆಯಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕುಟುಂಬದ ಮೇಲೆ ಇದ್ದ ಸಾಲದ ಒತ್ತಡವೇ ಈ ದುರಂತಕ್ಕೆ ಕಾರಣವಾಗಿರಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಇತರ ಸಾಕ್ಷ್ಯಾಧಾರಗಳ ವರದಿ ಬಂದ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ – 10 ಆರೋಪಿಗಳ ಬಂಧನ!



















