ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಸಮಯದಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದರೂ, ದೇಶದ ರೈತರು ಮತ್ತು ಸಾಮಾನ್ಯ ಗ್ರಾಹಕರನ್ನು ಬೆಲೆ ಏರಿಕೆಯ ಬಿಸಿಯಿಂದ ರಕ್ಷಿಸಲು ಕೇಂದ್ರ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ 50 ರೂಪಾಯಿಯಷ್ಟು ಹೆಚ್ಚಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದರೂ, ಸರ್ಕಾರ ಕೇವಲ 7 ರೂಪಾಯಿ ಮಾತ್ರ ಏರಿಕೆ ಮಾಡಿ ಉಳಿದ 43 ರೂಪಾಯಿ ಹೊರೆಯನ್ನು ತಾನೇ ಭರಿಸಿದೆ ಎಂದು ಅವರು ತಿಳಿಸಿದ್ದಾರೆ.
ತಿಂಗಳಿಗೆ 14,000 ಕೋಟಿ ರೂ. ಆರ್ಥಿಕ ಹೊರೆ
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ‘ಕಿಸಾನ್ ತಕ್ ಭಾರತ ಕೃಷಿ ಸಮ್ಮೇಳನ 2026’ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಬಗ್ಗೆ ವಿವರಿಸಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕೆಲವೇ ವಾರಗಳಲ್ಲಿ ಪ್ರತಿ ಬ್ಯಾರೆಲ್ಗೆ 70 ಡಾಲರ್ನಿಂದ 122 ಡಾಲರ್ಗೆ ಏರಿಕೆಯಾಗಿತ್ತು. ಇದರಿಂದ ಭಾರತಕ್ಕೂ ದೊಡ್ಡ ಸವಾಲು ಎದುರಾಗಿತ್ತು. ನೆರೆಯ ರಾಷ್ಟ್ರಗಳಲ್ಲಿ ಡೀಸೆಲ್ ದರ ಶೇ.40ರಿಂದ 50ರಷ್ಟು ಹೆಚ್ಚಾದರೆ, ಭಾರತದಲ್ಲಿ ರೈತರ ಹಿತದೃಷ್ಟಿಯಿಂದ ಬೆಲೆ ಏರಿಕೆಯನ್ನು ನಿಯಂತ್ರಿಸಲಾಯಿತು. ಗ್ರಾಹಕರು ಮತ್ತು ಅನ್ನದಾತರನ್ನು ಹೆಚ್ಚಿನ ಇಂಧನ ದರದಿಂದ ಪಾರು ಮಾಡಲು ಸರ್ಕಾರ ಪ್ರತಿ ತಿಂಗಳು 14,000 ಕೋಟಿ ರೂಪಾಯಿಗಳ ಆರ್ಥಿಕ ಹೊರೆಯನ್ನು ಹೊರುತ್ತಿದೆ ಎಂದು ಮೋದಿ ಹೇಳಿದರು.
ರಸಗೊಬ್ಬರ ಸಬ್ಸಿಡಿಗೆ 16 ಲಕ್ಷ ಕೋಟಿ ರೂ. ವೆಚ್ಚ
ಕೃಷಿ ವೆಚ್ಚವನ್ನು ನಿಯಂತ್ರಣದಲ್ಲಿಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಕಳೆದ 12 ವರ್ಷಗಳಲ್ಲಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಒದಗಿಸಲು ಸರ್ಕಾರ 16 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 5,000 ರೂ. ಬೆಲೆ ಬಾಳುವ ಒಂದು ಚೀಲ ಡಿಎಪಿ (DAP) ಗೊಬ್ಬರವನ್ನು ಭಾರತದ ರೈತರಿಗೆ ಕೇವಲ 1,300 ರೂಪಾಯಿಗೆ ನೀಡಲಾಗುತ್ತಿದೆ. ಅದೇ ರೀತಿ, ಜಾಗತಿಕ ಮಾರುಕಟ್ಟೆಯಲ್ಲಿ 3,000 ರೂಪಾಯಿ ಇರುವ ಯೂರಿಯಾ ಚೀಲವನ್ನು 300 ರೂಪಾಯಿಗಿಂತ ಕಡಿಮೆ ದರದಲ್ಲಿ ರೈತರಿಗೆ ತಲುಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಜಗತ್ತಿನ ಹಲವು ದೇಶಗಳ ಒಟ್ಟು ಬಜೆಟ್ಗಿಂತಲೂ ಈ 16 ಲಕ್ಷ ಕೋಟಿ ರೂಪಾಯಿ ಮೊತ್ತ ದೊಡ್ಡದಾಗಿದ್ದು, ಅನ್ನದಾತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಬೆಳವಣಿಗೆಗೆ ಸರ್ಕಾರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.


















