ಬೆಂಗಳೂರು: ಹೋರಾಟ ನಿರತ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ನಟ ವಿನೋದ್ ರಾಜ್ಕುಮಾರ್ ಬೆಂಬಲ ನೀಡಿದ್ದಾರೆ. ಚೆನ್ನೈನಿಂದ ಬಂದ ವಿನೋದ್ ರಾಜ್ ಅವರು 10 ಮೂಟೆ ಅಕ್ಕಿ, ತರಕಾರಿ ಮತ್ತು ದಿನಸಿ ಸಾಮಗ್ರಿಗಳೊಂದಿಗೆ ಫ್ರೀಡಂ ಪಾರ್ಕ್ಗೆ ಆಗಮಿಸಿ ಆಶಾ ನೌಕರರಿಗೆ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ಧೈರ್ಯ ತುಂಬಿ, ನನ್ನ ತಾಯಿಗೆ ಆರೋಗ್ಯ ಸಮಸ್ಯೆ ಇದ್ದಾಗ ಸೇವೆ ಮಾಡಿದ ಆಶಾ ಕಾರ್ಯಕರ್ತೆಯರು ನಿಷ್ಕಲ್ಮಶ ಮನಸ್ಸಿನಿಂದ ಸೇವೆ ಮಾಡುವ ದೇವರುಗಳು ಎಂದರು.
ಬೆಲೆ ಏರಿಕೆಯ ಪರಿಸ್ಥಿತಿಯಿಂದ ಆಶಾ ಕಾರ್ಯಕರ್ತೆಯರಿಗೆ ನೋವಾಗಿದ್ದು, ನಾವು ಅವರ ಜೊತೆ ನಿಲ್ಲಬೇಕು ಎಂದು ತಿಳಿಸಿದರು. ಆದಷ್ಟು ಬೇಗ ಸರ್ಕಾರ ಅವರ ಸಮಸ್ಯೆಗಳನ್ನು ಬಗೆಹರಿಸಿ ಕಷ್ಟಗಳನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು. ದಯವಿಟ್ಟು ಬೇಗ ಒಳ್ಳೆಯ ಸುದ್ದಿ ಕೊಡಿ ಸಿಎಂ ಅವರೇ, ನಿಮ್ಮ ಕೆಲಸ ನೆರವೇರಿದರೆ ನನಗೆ ಹಾಲು ಕುಡಿದಷ್ಟು ಸಂತಸವಾಗುತ್ತದೆ ಎಂದು ವಿನೋದ್ ರಾಜ್ ಹೇಳಿದರು.

















