ಬೆಂಗಳೂರು: ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿರುವ ನಟ ವಿನಯ್ ಗೌಡ, ಈಗ ಹೊಸ ಪಥದತ್ತ ಹೆಜ್ಜೆ ಹಾಕಿದ್ದಾರೆ.
ಈಗ ಅವರು ಸ್ಟಾರ್ ನಟರ ಸಿನಿಮಾಗಳಲ್ಲಿ ಖಡಕ್ ಖಳನಟನಾಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. “ಬಲರಾಮನ ದಿನಗಳು” ಸಿನಿಮಾದಲ್ಲಿ, ವಿನೋದ್ ಪ್ರಭಾಕರ್ ಎದುರು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಚಂದನವನದಲ್ಲಿ ಸೂಕ್ಷ್ಮ ಸಂವೇದಿ ನಿರ್ದೇಶಕರಲ್ಲಿ ಒಬ್ಬರಾಗಿರುವ ಕೆ.ಎಂ. ಚೈತನ್ಯ, “ಬಲರಾಮನ ದಿನಗಳು” ಸಿನಿಮಾ ಕೈಗೆತ್ತಿಕೊಂಡು, ಒಂದಷ್ಟು ಭಾಗದ ಶೂಟಿಂಗ್ ಸಹ ಮುಗಿಸಿದ್ದಾರೆ. “ಆ ದಿನಗಳು” ಸಿನಿಮಾ ಬಳಿಕ ಬೆಂಗಳೂರು ಭೂಗತ ಲೋಕದ ಮತ್ತೊಂದು ರಕ್ತ ಚರಿತ್ರೆಯ ಕಥೆಯನ್ನು ಕೆ.ಎಂ ಚೈತನ್ಯ ಈ ಸಿನಿಮಾದಲ್ಲಿಯೂ ಮುಂದುವರಿಸಲಿದ್ದಾರೆ. “ಮರಿ ಟೈಗರ್” ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ, ಖಳನಾಯಕನ ಪಾತ್ರದಲ್ಲಿ ವಿನಯ್ ಗೌಡ ನಟಿಸುತ್ತಿದ್ದಾರೆ.

ಈ ವಿಷಯವಾಗಿ ಮಾತನಾಡಿರುವ ಅವರು, “ಬಲರಾಮನ ದಿನಗಳು ಚಿತ್ರದ ನಿರ್ಮಾಪಕ ಶ್ರೇಯಸ್ ಅವರು ನನ್ನನ್ನು ಬಿಗ್ ಬಾಸ್ ನಲ್ಲಿ ನೋಡಿದ್ದರು. ಕತ್ತಿ ಅನ್ನೋ ಪಾತ್ರಕ್ಕೆ ವಿನಯ್ ಅವರೇ ಸೂಕ್ತ. ವಿನೋದ್ ಪ್ರಭಾಕರ್ ಅವರ ಎದುರು ನಟಿಸಲು ನಿರ್ದೇಶಕ ಚೈತನ್ಯ ಅವರಿಗೆ ನನ್ನನ್ನು ರೆಫರ್ ಮಾಡಿದರು. ನಿರ್ದೇಶಕರೂ ನನ್ನನ್ನು ಒಪ್ಪಿಕೊಂಡರು. ಅಲ್ಲಿಂದ ಈ ಸಿನಿಮಾ ಜರ್ನಿ ಶುರುವಾಯ್ತು” ಎನ್ನುತ್ತಾರೆ ವಿನಯ್ ಗೌಡ.


















