ಬೆಂಗಳೂರು : ಬ್ಯಾಂಕ್‌ಗಳಿಂದ ತನ್ನ ಸಾಲ ಮರುಪಾವತಿ, ಬಡ್ಡಿ ಇತ್ಯಾದಿಗಳ ಲೆಕ್ಕ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಉದ್ಯಮಿ ವಿಜಯ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂದು ಹೈಕೋರ್ಟ್‌ನಲ್ಲಿ ವಿಜಯ್ ಮಲ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆದಿದ್ದು, ವಿಜಯ್ ಮಲ್ಯ ಅವರು ಬ್ಯಾಂಕ್‌ಗಳ ಸಾಲ ಸಂಪೂರ್ಣವಾಗಿ ತೀರಿಸಿದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಜಯ್ ಮಲ್ಯ ಪರ ವಕೀಲರು ವಾದ ಮಂಡಿಸಿದ್ದಾರೆ.
ವಿಜಯ್ ಮಲ್ಯ ಅವರು 6,200 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿತ್ತು. 14,000 ಕೋಟಿ ಹಣವನ್ನು ಅವರಿಂದ ವಸೂಲಿ ಮಾಡಿದ್ದಾರೆ. ಹೀಗೆಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ ಸಹ 10,200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣವಾಗಿ ಸಾಲ ತೀರಿದರೂ ಕೂಡ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದ್ದಾರೆ.
ಬ್ಯಾಂಕುಗಳ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು ವಾದ ಮಂಡಿಸಿದರು. ವಿಜಯ್ ಮಲ್ಯ ದೇಶ ತೊರೆದು ದೇಶ ಭ್ರಷ್ಟರಾಗಿದ್ದಾರೆ. ವಿಜಯ್ ಮಲ್ಯ ಮುಗ್ಧರಾಗಿದ್ದರೆ . ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರು ದೇಶ ಬಿಟ್ಟು ಪರಾರಿ ಆಗಿದ್ದಾರೆ. ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆ ಎಂದು ವಾದಿಸಿದ್ದಾರೆ.
ವಾದ ಆಲಿಸಿದ ಬಳಿಕ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಮೂರ್ತಿ ಲಲಿತ ಕನ್ನೆಗಂಟಿ ಅವರು ಬ್ಯಾಂಕುಗಳ ಪರ ವಕೀಲರಿಗೆ ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಬಿಹಾರ ಚುನಾವಣೆ | ಕರ್ನಾಟಕದಲ್ಲಿ ಕೆಲಸ ಮಾಡುವ ಬಿಹಾರಿಗಳಿಗೆ 3 ದಿನ ರಜೆ ಕೊಡಿ | ಡಿಸಿಎಂ ಡಿಕೆಶಿ ಮನವಿ



















