ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಿಂದ ವಿಚಾರಣಾಧೀನ ಕೈದಿ ಪರಾರಿಯಾಗಿರುವ ಘಟನೆ ನಡೆದಿದೆ.
ವಿಕ್ಟೋರಿಯಾ ಟ್ರಾಮಾ ಸೆಂಟರ್ ನಿಂದ ಕೈದಿ ಚಂದ್ರಶೇಖರ್ ಎಂಬಾತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು, ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯರಿಂದಲೂ ಮಾಹಿತಿ ಪಡೆದಿದ್ದಾರೆ.
ಈ ಘಟನೆ ಬೆಳಗಿನ ಜಾವ 5.30ರ ವೇಳೆಗೆ ನಡೆದಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ವಿಚಾರಣಾ ಕೈದಿಯನ್ನು ಕರೆದುಕೊಂಡು ಪೊಲೀಸರು ಬಂದಿದ್ದರು. ಆದರೆ, ಆಸ್ಪತ್ರೆಯಿಂದ ಸಿನಿಮೀಯ ರೀತಿಯಲ್ಲಿ ಆರೋಪಿ ಪರಾರಿಯಾಗಿದ್ದಾನೆ.
ರಾಬರಿ ಕೇಸ್ ಆರೋಪಿಯಾಗಿದ್ದ ಚಂದ್ರಶೇಖರ್, ಮೇ 2ರಂದು ಆಸ್ಪತ್ರೆಗೆ ಬಂದಿದ್ದ. ಆತನಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಪತ್ತೆಯಾಗಿರುವ ಕೈದಿ ಮೇ 2ರಂದು ಆತ್ಮಹತ್ಯೆಗೆ ಕೂಡ ಯತ್ನಿಸಿದ್ದ ಎನ್ನಲಾಗಿದೆ. ಗ್ಲಾಸ್ ಪುಡಿ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈಗ ಕಾಲಿಗೆ ಲಾಕ್ ಮಾಡಿ ಹೊರಗಡೆ ಪೊಲೀಸರು ನಿಂತಿದ್ದ ವೇಳೆ, ಲಾಕ್ ಔಪನ್ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.



















