ರಾಯ್ಪುರ : ತಮ್ಮ ಏಕೈಕ ಪುತ್ರನ ಸಾವಿನ ದುಃಖವನ್ನು ತಾಳಿಕೊಳ್ಳಲಾಗದೇ ದಂಪತಿ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯ ಧರ್ದೇಯಿ ಗ್ರಾಮದಲ್ಲಿ ನಡೆದಿದೆ. ಈ ದಂಪತಿ ಮನೆಯ ಅಂಗಳದ ಬೇವಿನ ಮರಕ್ಕೆ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣ ಪಟೇಲ್ (48) ಮತ್ತು ಅವರ ಪತ್ನಿ ರಾಮಾ ಬಾಯಿ (47) ಮೃತಪಟ್ಟ ದುರ್ದೈವಿಗಳು. ಇವರ 21 ವರ್ಷದ ಮಗ ಆದಿತ್ಯ ಪಟೇಲ್ ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಮಗನ ಸಾವಿನ ನಂತರ ದಂಪತಿ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ನಾಲ್ಕು ಪುಟಗಳ ಮರಣಪತ್ರ
ಆತ್ಮಹತ್ಯೆಗೂ ಮುನ್ನ ದಂಪತಿ ನಾಲ್ಕು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟಿದ್ದಾರೆ. ಜತೆಗೆ ಒಂದು ವಿಡಿಯೋ ಸಂದೇಶವನ್ನೂ ದಾಖಲಿಸಿದ್ದಾರೆ. ಅದರಲ್ಲಿ ಮಗ ಆದಿತ್ಯ ನಮ್ಮ ಪಾಲಿನ ದೇವರು ಮತ್ತು ನಮ್ಮ ಜಗತ್ತಾಗಿದ್ದ. ಅವನು ಮೃತಪಟ್ಟ ನಂತರ ನಾವು ಕೇವಲ ಬದುಕಿದ್ದೇವೆಯೇ ಹೊರತು ಜೀವಂತವಾಗಿಲ್ಲ ಎಂದು ಕೃಷ್ಣ ಪಟೇಲ್ ಬರೆದಿದ್ದಾರೆ. ಅಲ್ಲದೆ, ಅಪಘಾತದ ದಿನ ಮಗನನ್ನು ದೇವಸ್ಥಾನದ ಕೆಲಸಕ್ಕೆ ಹೋಗುವಂತೆ ಒತ್ತಾಯ ಮಾಡಿದ್ದೇ ನನ್ನ ಜೀವನದ ಅತಿದೊಡ್ಡ ತಪ್ಪು ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿರುವುದು ಗ್ರಾಮಸ್ಥರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
ಆಸ್ತಿ ಹಂಚಿಕೆ ಬಗ್ಗೆಯೂ ಉಲ್ಲೇಖ
ದಂಪತಿ ತಮ್ಮ ಸಾವಿನ ನಂತರ ಮಗನ ಅಪಘಾತದ ವಿಮೆ ಪರಿಹಾರದ ಹಣವನ್ನು ತಮ್ಮ ಅಣ್ಣಂದಿರಾದ ಕುಲಭಾರ ಪಟೇಲ್ ಮತ್ತು ಜಲಭಾರ ಪಟೇಲ್ ಅವರಿಗೆ ನೀಡಬೇಕೆಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ. “ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ಭಗವಾನ್ ಶಿವನ ಪಾದ ಸೇರುತ್ತಿದ್ದೇವೆ. ನಮ್ಮ ಸಾವಿಗೆ ಯಾರೂ ಜವಾಬ್ದಾರರಲ್ಲ. ನಮಗಾಗಿ ಯಾರೂ ದುಃಖಿಸಬೇಡಿ, ಸಂತೋಷದಿಂದ ನಮಗೆ ವಿದಾಯ ಹೇಳಿ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಿವನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ ; ಹಣ ನೀಡುವ ಯುವಕರೇ ಇವಳ ಟಾರ್ಗೆಟ್ | ಮೂರು ಮೂರು ಹೆಸರಲ್ಲಿ ಪ್ರೀತಿ ನಾಟಕವಾಡಿ ಲಕ್ಷಾಂತರ ರೂ. ಗುಳುಂ



















