ಉದಯಪುರ: ರಾಜಸ್ಥಾನದ ಉದಯಪುರದಲ್ಲಿ 55 ವರ್ಷದ ಮಹಿಳೆಯೊಬ್ಬರು 17ನೇ ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಸರ್ಕಾರಿ ಯೋಜನೆಗಳಿದ್ದರೂ, ತೀವ್ರ ಬಡತನ ಮತ್ತು ಸೂರು ಇಲ್ಲದೆ ಕಷ್ಟಪಡುತ್ತಿರುವ ಈ ಬುಡಕಟ್ಟು ಕುಟುಂಬದ ಕಥೆ ಇದೀಗ ಬೆಳಕಿಗೆ ಬಂದಿದ್ದು, ಹಲವರನ್ನು ಅಚ್ಚರಿಗೆ ನೂಕಿದೆ.
ಮಂಗಳವಾರ ರೇಖಾ ಗಾಲ್ಬೆಲಿಯಾ ಎಂಬ 55 ವರ್ಷದ ಮಹಿಳೆ 17ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿಂದೆ ಅವರು 16 ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಆ ಪೈಕಿ ನಾಲ್ವರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದವು. ಸದ್ಯ ಬದುಕುಳಿದಿರುವ ಮಕ್ಕಳಲ್ಲಿ ಐವರಿಗೆ ಈಗಾಗಲೇ ಮದುವೆಯಾಗಿದ್ದು, ಅವರಿಗೂ ಮಕ್ಕಳಿದ್ದಾರೆ.
“ನಾವೆಲ್ಲರೂ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇವೆ. ನಮ್ಮ ತಾಯಿಗೆ ಇಷ್ಟೊಂದು ಮಕ್ಕಳಿದ್ದಾರೆ ಎಂದು ಕೇಳಿ ಎಲ್ಲರೂ ಆಘಾತಕ್ಕೊಳಗಾಗುತ್ತಾರೆ,” ಎಂದು ರೇಖಾ ಅವರ ಮಗಳು ಶೀಲಾ ಕಲ್ಬೆಲಿಯಾ ತಮ್ಮ ಕುಟುಂಬದ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
ಬಡತನದ ಬೇಗೆಯಲ್ಲಿ ಕುಟುಂಬ
ರೇಖಾ ಅವರ ಪತಿ ಕವ್ರಾ ಕಲ್ಬೆಲಿಯಾ ಅವರು ತಮ್ಮ ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ವಿವರಿಸಿದ್ದಾರೆ. “ನಮಗೆ ಸ್ವಂತ ಮನೆಯಿಲ್ಲ, ಹೊಟ್ಟೆಪಾಡಿಗಾಗಿ ಹೆಣಗಾಡುತ್ತಿದ್ದೇವೆ. ಮಕ್ಕಳನ್ನು ಸಾಕಲು ಶೇ.20ರಷ್ಟು ಬಡ್ಡಿಗೆ ಸಾಲ ಮಾಡಿದ್ದೇನೆ. ಲಕ್ಷಾಂತರ ರೂಪಾಯಿ ಮರುಪಾವತಿ ಮಾಡಿದ್ದರೂ, ಬಡ್ಡಿಯೇ ಇನ್ನೂ ತೀರುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
ಗುಜರಿ ಆಯ್ದು ಜೀವನ ನಡೆಸುವ ಈ ಕುಟುಂಬಕ್ಕೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಕೂಡ ಸಾಧ್ಯವಾಗಿಲ್ಲ. “ಪಿಎಂ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿದ್ದರೂ, ಭೂಮಿ ನಮ್ಮ ಹೆಸರಿನಲ್ಲಿಲ್ಲದ ಕಾರಣ ನಾವು ಇನ್ನೂ ಮನೆಯಿಲ್ಲದೆ ಬೀದಿಯಲ್ಲಿದ್ದೇವೆ. ಊಟ, ಮದುವೆ, ಶಿಕ್ಷಣಕ್ಕೆ ನಮ್ಮ ಬಳಿ ಹಣವಿಲ್ಲ. ಈ ಸಮಸ್ಯೆಗಳು ಪ್ರತಿದಿನ ನಮ್ಮನ್ನು ಕಾಡುತ್ತಿವೆ,” ಎಂದು ಕವ್ರಾ ಹೇಳಿದ್ದಾರೆ.
ವೈದ್ಯರಿಗೆ ತಪ್ಪು ಮಾಹಿತಿ
ಜಾಡೋಲ್ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞರಾದ ರೋಶನ್ ದರಂಗಿ ಅವರ ಪ್ರಕಾರ, ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ, ಕುಟುಂಬವು ಇದು ಅವರ ನಾಲ್ಕನೇ ಮಗು ಎಂದು ತಪ್ಪು ಮಾಹಿತಿ ನೀಡಿತ್ತು. ನಂತರ, ಇದು ಅವರ 17ನೇ ಗರ್ಭಧಾರಣೆ ಎಂಬ ಸತ್ಯ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.