ಬೆಂಗಳೂರು : ನಗರದ ವಿದ್ಯಾರಣ್ಯಪುರದಿಂದ ಕಾಲೇಜಿಗೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಎಂಟು ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ತನಿಷ್ಕಾ ಮತ್ತು ತೇಜಸ್ವಿನಿ ನಾಪತ್ತೆಯಾಗಿದ್ದ ಯುವತಿಯರಾಗಿದ್ದು, ತನಿಷ್ಕಾ ದ್ವಿತೀಯ ಪಿಯುಸಿ ಹಾಗೂ ತೇಜಸ್ವಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇದೇ ವರ್ಷದ ಜನವರಿ 31ರಂದು ಇಬ್ಬರೂ ನಾಪತ್ತೆಯಾಗಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿ ಪೊಲೀಸರು ಹುಡುಕಾಟ ನಡೆಸಿದ್ದರು.
ಯುವತಿಯರ ಪತ್ತೆಯಾಗದ ಹಿನ್ನೆಲೆಯಲ್ಲಿ ತನಿಷ್ಕಾ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಐದಾರು ತಿಂಗಳ ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಕಳೆದ ಮೂರು ತಿಂಗಳಿಂದ ಸಿಐಡಿ ಅಧಿಕಾರಿಗಳು ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದರು.
ವಿದ್ಯಾರಣ್ಯಪುರ ಪೊಲೀಸರು ನಡೆಸಿದ್ದ ಆರಂಭಿಕ ತನಿಖೆಯಲ್ಲಿ ಇಬ್ಬರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಸಿಕ್ಕಿತ್ತು. ಬೆಟ್ಟದಲ್ಲಿ ಮಗುವೊಂದರೊಂದಿಗೆ ಇಬ್ಬರೂ ಆಟವಾಡಿದ್ದರು. ಈ ವೇಳೆ ಮಗುವಿನ ತಾಯಿ ಇಬ್ಬರ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಫೋಟೋ ಹಾಗೂ ಇತರ ಸುಳಿವುಗಳನ್ನು ಆಧರಿಸಿ ಸಿಐಡಿ ತನಿಖೆ ಮುಂದುವರಿಸಿತ್ತು.
ತನಿಖೆ ವೇಳೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿರುವುದು ಪತ್ತೆಯಾಗಿದೆ. ಮನೆಯಲ್ಲಿನ ಒತ್ತಡದ ಹಿನ್ನೆಲೆಯಲ್ಲಿ ತನಿಷ್ಕಾ ಆ ಯುವಕನಿಗೆ ತಾನು ಮತ್ತು ತನ್ನ ತಂಗಿಗೆ ಅಪ್ಪ-ಅಮ್ಮ ಸೇರಿದಂತೆ ಕುಟುಂಬದಲ್ಲಿ ಯಾರೂ ಇಲ್ಲ ಎಂದು ಸುಳ್ಳು ಹೇಳಿದ್ದಳು ಎನ್ನಲಾಗಿದೆ. ಬಳಿಕ ಇಬ್ಬರೂ ಆ ಯುವಕನ ಜೊತೆಗೆ ತೆರಳಿದ್ದರು. ನಂತರ ತನಿಷ್ಕಾ ಆ ಯುವಕನನ್ನು ಮದುವೆಯಾಗಿದ್ದು, ಇಬ್ಬರೂ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು ಎನ್ನಲಾಗಿದೆ. ತೇಜಸ್ವಿನಿಯನ್ನು ತನ್ನ ತಂಗಿ ಎಂದು ಹೇಳಿಕೊಂಡು ತನ್ನೊಂದಿಗೆ ಇರಿಸಿಕೊಂಡಿದ್ದಳು.
ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ಬಳಸಲು ಮುಂದಾದಾಗ ತನಿಷ್ಕಾ ಸಿಕ್ಕಿಬಿದ್ದಿದ್ದಾಳೆ. ತನಿಷ್ಕಾ ನೀಡಿದ್ದ ಆಧಾರ್ ಕಾರ್ಡ್ ಸಂಖ್ಯೆಯ ಬಳಕೆಯ ಬಗ್ಗೆ ಸರ್ವಿಸ್ ಪ್ರೊವೈಡರ್‌ನಿಂದ ಸಿಐಡಿಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ತೆರಳಿದ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇಬ್ಬರೂ ಪತ್ತೆಯಾಗಿದ್ದಾರೆ.
ಮನೆಯಿಂದ ಕಾಲೇಜಿಗೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಪೈಕಿ ತನಿಷ್ಕಾ ಮದುವೆಯಾಗಿದ್ದು, ಸದ್ಯ ಗರ್ಭಿಣಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರನ್ನೂ ಇಂದು ಹೈಕೋರ್ಟ್ ಮುಂದೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.
ಇದನ್ನೂ ಓದಿ : ಏಷ್ಯಾ ಕಪ್ ಅಬ್ಬರಕ್ಕೆ ದೀಪ್ತಿ ಶರ್ಮಾಗೆ ಭರ್ಜರಿ ಜಿಗಿತ : ಐಸಿಸಿ ಟಿ20 ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನ



















