ಅಗರ್ತಲಾ : ತ್ರಿಪುರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನುರಾಗ್ ಧನಕರ್ ಅವರು ಅಗರ್ತಲಾದಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ತಮ್ಮ ಚೇಂಬರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ (ಜುಲೈ 20) ಬೆಳಿಗ್ಗೆ ಅವರು ಎಂದಿನಂತೆ ಕಚೇರಿಗೆ ಆಗಮಿಸಿದ್ದರು. ಕೆಲವೇ ಸಮಯದ ಬಳಿಕ ಅವರ ಚೇಂಬರ್‌ನಿಂದ ಗುಂಡಿನ ಸದ್ದು ಕೇಳಿಬಂದಿದ್ದು, ಸಿಬ್ಬಂದಿ ಒಳಗೆ ಹೋಗಿ ನೋಡಿದಾಗ ಅವರು ತೀವ್ರ ರಕ್ತಸ್ರಾವದ ಸ್ಥಿತಿಯಲ್ಲಿ ನೆಲಕ್ಕುರುಳಿರುವುದು ಕಂಡುಬಂದಿದೆ.
ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಧನಕರ್ ಅವರು ತಮ್ಮ ಸೇವಾ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ತಂಡ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಡಿಜಿಪಿಯ ದಿಢೀರ್ ಸಾವಿನ ಸುದ್ದಿ ತ್ರಿಪುರ ಪೊಲೀಸ್ ಇಲಾಖೆಯಲ್ಲಿ ತೀವ್ರ ಆಘಾತ ಮೂಡಿಸಿದ್ದು, ಸಹೋದ್ಯೋಗಿಗಳು ಮತ್ತು ಸಿಬ್ಬಂದಿ ದುಃಖ ವ್ಯಕ್ತಪಡಿಸಿದ್ದಾರೆ.
ಅನುರಾಗ್ ಧನಕರ್ ಅವರ ಸಾವಿಗೆ ನಿಖರ ಕಾರಣವೇನು, ಅವರು ಈ ನಿರ್ಧಾರ ಕೈಗೊಳ್ಳಲು ವೈಯಕ್ತಿಕ ಅಥವಾ ವೃತ್ತಿಪರ ಒತ್ತಡಗಳು ಕಾರಣವಾಗಿದ್ದವೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಘಟನೆಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಅನುರಾಗ್ ಧನಕರ್ ಅವರು ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, 1984ರ ಸಿಖ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ)ಯನ್ನು ಮುನ್ನಡೆಸಿದ್ದರು. ಅಲ್ಲದೆ, ಸಿಬಿಐಯಲ್ಲಿ ಬಹುಚರ್ಚಿತ ನೀರವ್ ಮೋದಿ ಪ್ರಕರಣದ ತನಿಖೆಯ ನೇತೃತ್ವವನ್ನೂ ವಹಿಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ : ನಲ್ಲಿ ನೀರು ಹರಿಸಿ ಪ್ರಿಯಕರನ ತುಂಡರಿಸಿದ ದೇಹ ಡ್ರಮ್‌ನಲ್ಲಿಟ್ಟ ಪ್ರೇಯಸಿ : ಕಲ್ಯಾಣ್‌ನಲ್ಲೊಂದು ಭೀಕರ ಕೊಲೆ!



















