ಚಿಕ್ಕಮಗಳೂರು : ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೆಮ್ಮಣ್ಣುಗುಂಡಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ವ್ಯಾಘ್ರ ದರ್ಶನವಾಗಿದೆ. ಅಭಯಾರಣ್ಯದ ಅಂಚಿನ ರಸ್ತೆಯಲ್ಲೇ ಹುಲಿಯೊಂದು ರಾಜಗಾಂಭೀರ್ಯದಿಂದ ಕುಳಿತಿದ್ದ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ತಣಿಗೆಬೈಲ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರು ವಾಹನದಲ್ಲಿ ತೆರಳುತ್ತಿದ್ದಾಗ ಅರಣ್ಯದ ಅಂಚಿನಲ್ಲಿ ಹುಲಿಯೊಂದು ಯಾವುದೇ ಅಂಜಿಕೆಯಿಲ್ಲದೆ ಆರಾಮವಾಗಿ ಕುಳಿತಿರುವುದು ಕಂಡುಬಂದಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ಪ್ರವಾಸಿಗರಿಗೂ ಹುಲಿ ದಿಟ್ಟವಾಗಿ ‘ಲುಕ್’ ಕೊಟ್ಟಿದೆ.

ಹುಲಿಯು ಕೆಲಕಾಲ ಅಲ್ಲೇ ಕುಳಿತು, ನಂತರ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ. ಈ ಭಾಗದಲ್ಲಿ ಹುಲಿಗಳ ಸಂಚಾರವಿರುವುದು ದೃಢಪಟ್ಟಿದ್ದು, ಕೆಮ್ಮಣ್ಣುಗುಂಡಿ ಮತ್ತು ತಣಿಗೆಬೈಲ್ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ವಾಹನಗಳಿಂದ ಕೆಳಗಿಳಿಯಬಾರದು ಮತ್ತು ಕಾಡುಪ್ರಾಣಿಗಳಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಸಿಡಿದೆದ್ದ ಸ್ಟಾಲಿನ್ – ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಪ್ರತಿಗೆ ಬೆಂಕಿ ಹಚ್ಚಿ, ಕಪ್ಪು ಬಾವುಟ ಪ್ರದರ್ಶನ!



















