ಬೆಂಗಳೂರು : ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟಿಂಗ್ ಜೋಡಿ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಬಣ್ಣಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ‘ಕ್ವಾಲಿಫೈಯರ್ 1’ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ಈ ಯುವ ಜೋಡಿಯ ಸ್ಥಿರತೆ, ಆಟದ ಬಗೆಗಿನ ಅರಿವು ಹಾಗೂ ಇತರೆ ಯಾವುದೇ ಆರಂಭಿಕರಿಗಿಂತ ವೇಗವಾಗಿ ಜೊತೆಯಾಟಗಳನ್ನು ಕಟ್ಟುವ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ದಾಖಲೆಗಳ ಸರದಾರರಾದ ಗಿಲ್-ಸುದರ್ಶನ್ ಜೋಡಿ
ಐಪಿಎಲ್ 2026ರ ಆವೃತ್ತಿಯಲ್ಲೂ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಗುಜರಾತ್ ಟೈಟನ್ಸ್ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ. ಕಳೆದ ಆವೃತ್ತಿಯಲ್ಲಿ ತೋರಿದ್ದ ಅದ್ಭುತ ಲಯವನ್ನು ಈ ವರ್ಷವೂ ಮುಂದುವರಿಸಿರುವ ಈ ಜೋಡಿ, ಟಿ20 ಮಾದರಿಯಲ್ಲಿ 10ನೇ ಶತಕದ ಜೊತೆಯಾಟವನ್ನು ದಾಖಲಿಸುವ ಮೂಲಕ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದೆ.
ಈ ಮೂಲಕ ವಿರಾಟ್ ಕೊಹ್ಲಿ-ಕ್ರಿಸ್ ಗೇಲ್, ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ ಹಾಗೂ ಬಾಬರ್ ಅಜಮ್-ಮೊಹಮ್ಮದ್ ರಿಜ್ವಾನ್ ಅವರಂತಹ ದಂತಕಥೆಗಳ ದಾಖಲೆಯನ್ನು ಇವರು ಸರಿಗಟ್ಟಿದ್ದಾರೆ. ಜಿಯೋ ಹಾಟ್‌ಸ್ಟಾರ್‌ನ ‘ಚಾಂಪಿಯನ್ಸ್ ವಾಲಿ ಕಾಮೆಂಟರಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಸುರೇಶ್ ರೈನಾ, ಗುಜರಾತ್ ಟೈಟನ್ಸ್ ಜೋಡಿಯು ಐಪಿಎಲ್ ಕಂಡ ಬೇರೆಲ್ಲಾ ಆರಂಭಿಕರಿಗಿಂತ ಹೇಗೆ ವಿಭಿನ್ನವಾಗಿ ನಿಲ್ಲುತ್ತದೆ ಎಂಬುದನ್ನು ಸವಿವರವಾಗಿ ವಿಶ್ಲೇಷಿಸಿದ್ದಾರೆ. ಟಾಟಾ ಐಪಿಎಲ್ ಇತಿಹಾಸದಲ್ಲಿ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅತ್ಯುತ್ತಮ ಬ್ಯಾಟಿಂಗ್ ಜೋಡಿಯಾಗಿದ್ದು, ಜೊತೆಯಾಗಿ ಆಡಿದ ಕೇವಲ 46 ಇನ್ನಿಂಗ್ಸ್‌ಗಳಲ್ಲಿ 21 ಬಾರಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದ್ದಾರೆ ಎಂದು ಅವರು ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ.
ಕೊಹ್ಲಿ, ಎಬಿಡಿ ಹಾಗೂ ಗೇಲ್ ದಾಖಲೆಗಳೇ ಉಡೀಸ್
ಈ ಯುವ ಆಟಗಾರರ ಸಾಧನೆಯನ್ನು ದಿಗ್ಗಜರೊಂದಿಗೆ ಹೋಲಿಸಿದ ರೈನಾ, ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 21 ಬಾರಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದ ಕೀರ್ತಿ ಗಿಲ್-ಸುದರ್ಶನ್ ಜೋಡಿಗೆ ಸಲ್ಲುತ್ತದೆ ಎಂದಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಈ ಸಾಧನೆ ಮಾಡಲು 59 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ಮೂರನೇ ಸ್ಥಾನದಲ್ಲಿರುವ ಎಬಿ ಡಿವಿಲಿಯರ್ಸ್ ಮತ್ತು ಕೊಹ್ಲಿ ಜೋಡಿಗೆ 76 ಇನ್ನಿಂಗ್ಸ್‌ಗಳ ಅಗತ್ಯವಿತ್ತು. ಇದು ಗಿಲ್ ಹಾಗೂ ಸಾಯಿ ಅವರ ಗುಣಮಟ್ಟವನ್ನು ಹಾಗೂ ಅವರು ಪರಸ್ಪರರ ಆಟಕ್ಕೆ ನೀಡುವ ಪೂರಕ ಬೆಂಬಲವನ್ನು ಎತ್ತಿ ತೋರಿಸುತ್ತದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ. ಅಪಾಯಕಾರಿ ಹೊಡೆತಗಳಿಗೆ ಕೈಹಾಕದೆ, ಅತ್ಯಂತ ಜವಾಬ್ದಾರಿಯುತವಾಗಿ ಇನ್ನಿಂಗ್ಸ್ ನಿಯಂತ್ರಿಸುವ ಇವರ ಸಾಮರ್ಥ್ಯವೇ ಗುಜರಾತ್ ಟೈಟನ್ಸ್ ತಂಡವನ್ನು ಟೂರ್ನಿಯಲ್ಲಿ ಅತ್ಯಂತ ಸ್ಥಿರ ಬ್ಯಾಟಿಂಗ್ ಪಡೆಯನ್ನಾಗಿ ರೂಪಿಸಿದೆ ಎಂಬುದು ಮಾಜಿ ಕ್ರಿಕೆಟಿಗನ ವಾದವಾಗಿದೆ.
ಸ್ಥಿರತೆ ಹಾಗೂ ಆಟದ ಅರಿವೇ ಯಶಸ್ಸಿನ ಗುಟ್ಟು
ಆರಂಭಿಕ ಜೋಡಿಯಾಗಿ ಗಿಲ್ ಮತ್ತು ಸುದರ್ಶನ್ ಅವರ ಸ್ಥಿರತೆ ನಿಜಕ್ಕೂ ಗಮನಾರ್ಹವಾದದ್ದು. ಇನ್ನಿಂಗ್ಸ್ ಕಟ್ಟಲು ಸಮಯ ತೆಗೆದುಕೊಳ್ಳುವ ಇವರು, ಡಾಟ್ ಬಾಲ್‌ಗಳನ್ನು ಕನಿಷ್ಠ ಮಟ್ಟದಲ್ಲಿಟ್ಟುಕೊಂಡು ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಾರೆ. ಒಬ್ಬರು ಬೌಲರ್‌ನ ವೇಗವನ್ನು ಬಳಸಿಕೊಂಡರೆ, ಮತ್ತೊಬ್ಬರು ಕ್ರೀಸ್‌ನಲ್ಲಿ ಜಾಗ ಸೃಷ್ಟಿಸಿಕೊಂಡು ಆಂಗಲ್ ಮೂಲಕ ರನ್ ಕಲೆಹಾಕುತ್ತಾರೆ. ಇವರಿಬ್ಬರೂ ಅತ್ಯಂತ ಫಿಟ್ ಆಗಿದ್ದು, ಯಾವ ಹೊಡೆತಗಳನ್ನು ಯಾವಾಗ ಆಡಬೇಕು, ಯಾವಾಗ ಆಕ್ರಮಣಕಾರಿಯಾಗಬೇಕು ಎಂಬ ಆಟದ ಸಂಪೂರ್ಣ ಅರಿವನ್ನು ಹೊಂದಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ರೈನಾ ವಿಶ್ಲೇಷಿಸಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ಮಾಜಿ ವೇಗಿ ಉಮೇಶ್ ಯಾದವ್ ಕೂಡ ಈ ಜೋಡಿಯ ಬ್ಯಾಟಿಂಗ್ ವೈಖರಿಯನ್ನು ಕೊಂಡಾಡಿದ್ದು, ಪವರ್‌ಪ್ಲೇ ಓವರ್‌ಗಳಲ್ಲಿ ಯಾವುದೇ ಅನಗತ್ಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳದೆ ಇವರು ರನ್ ಕಲೆಹಾಕುವ ರೀತಿಯನ್ನು ಶ್ಲಾಘಿಸಿದ್ದಾರೆ.
ಆರ್‌ಸಿಬಿ ವಿರುದ್ಧದ ‘ಕ್ವಾಲಿಫೈಯರ್ 1’ ಕದನಕ್ಕೆ ಸಜ್ಜು
ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಇಬ್ಬರೂ ವೈಯಕ್ತಿಕವಾಗಿ 600 ರನ್‌ಗಳ ಗಡಿಯನ್ನು ದಾಟಿದ್ದು, ಟೂರ್ನಿಯುದ್ದಕ್ಕೂ ಗುಜರಾತ್ ಫ್ರಾಂಚೈಸಿಗೆ ಭದ್ರ ಬುನಾದಿ ಒದಗಿಸಿದ್ದಾರೆ. ಯಾವುದೇ ಹೈ-ರಿಸ್ಕ್ ಹೊಡೆತಗಳಿಗೆ ಮುಂದಾಗದೆ, ಕ್ರೀಸ್‌ನಲ್ಲಿ ಸಂಪೂರ್ಣವಾಗಿ ನೆಲೆನಿಂತು ನಿರಾಯಾಸವಾಗಿ ರನ್ ಗಳಿಸುವ ಇವರ ಶೈಲಿ ಪವರ್‌ಪ್ಲೇ ಅಂತ್ಯದ ವೇಳೆಗೆ ತಂಡದ ಮೊತ್ತವನ್ನು ಅನಾಯಾಸವಾಗಿ 60ರ ಗಡಿದಾಟಿಸುತ್ತದೆ. ಪಿಚ್‌ನ ಸ್ವರೂಪ ಹಾಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವ ಈ ಯುವ ಜೋಡಿ, ಇದೀಗ ಐಪಿಎಲ್ 2026ರ ಫೈನಲ್‌ಗೆ ನೇರ ಪ್ರವೇಶ ಪಡೆಯುವ ಹಂಬಲದೊಂದಿಗೆ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲು ಸಜ್ಜಾಗಿದೆ. ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ವಿಭಾಗದ ಸಂಪೂರ್ಣ ಜವಾಬ್ದಾರಿ ಮತ್ತೊಮ್ಮೆ ಇದೇ ಆರಂಭಿಕರ ಹೆಗಲ ಮೇಲಿದೆ.
ಇದನ್ನೂ ಓದಿ : GT ವಿರುದ್ಧದ ಕ್ವಾಲಿಫೈಯರ್ ಪಂದ್ಯಕ್ಕೆ ಫಿಲ್ ಸಾಲ್ಟ್ ಲಭ್ಯತೆ ; ಪಾಟಿದಾರ್ ಮಹತ್ವದ ಮಾಹಿತಿ!


















