ಮುಂಬೈ: ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಮುಂಬರುವ 2026-27ರ ಸಾಲಿನ ರಣಜಿ ಟ್ರೋಫಿ ಋತುವಿಗಾಗಿ ತನ್ನ ತಂಡವನ್ನು ಪ್ರಕಟಿಸಿದೆ. ಅಚ್ಚರಿಯೆಂಬಂತೆ, ಈ ತಂಡದಲ್ಲಿ ಭಾರತದ ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಸಿದ್ದೇಶ್ ಲಾಡ್ ಅವರನ್ನು ತಂಡದ ನಾಯಕನನ್ನಾಗಿ ಹಾಗೂ ಆಯುಷ್ ಮ್ಹಾತ್ರೆ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ಸ್ಟಾರ್ ಆಟಗಾರರನ್ನು ಕೈಬಿಟ್ಟಿರುವ ಬಗ್ಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಂಬೈ ತಂಡದ ಮುಖ್ಯ ಆಯ್ಕೆಗಾರ ರಾಜೇಶ್ ಪವಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಆಟಗಾರರ ಕೈಬಿಟ್ಟ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ ಕಡೆಗಣನೆಗೆ ಕಾರಣವೇನು?
ಭಾರತ ತಂಡದಿಂದ ಹೊರಬಿದ್ದಿರುವ ಸೂರ್ಯಕುಮಾರ್ ಯಾದವ್, ದೇಶೀಯ ಟೂರ್ನಿಗಳಲ್ಲಿ ಆಡಲು ಲಭ್ಯವಿದ್ದರು. ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ತವಕದಲ್ಲಿರುವ ಅವರು ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಮುಂಬೈ ತಂಡದಲ್ಲಿ ಅವರ ಹೆಸರಿಲ್ಲದಿರುವುದು ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ವಿವರಿಸಿರುವ ರಾಜೇಶ್ ಪವಾರ್, ಸೂರ್ಯಕುಮಾರ್ ಅವರನ್ನು ರಣಜಿ ಟ್ರೋಫಿಯಿಂದ ಸಂಪೂರ್ಣವಾಗಿ ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸೂರ್ಯಕುಮಾರ್ ಕಳೆದ ಒಂದೂವರೆ ವರ್ಷದಿಂದ ಯಾವುದೇ ರೆಡ್-ಬಾಲ್ (ಟೆಸ್ಟ್ ಮಾದರಿ) ಕ್ರಿಕೆಟ್ ಆಡಿಲ್ಲ. ಹೀಗಾಗಿ, ಅವರು ನೇರವಾಗಿ ರಣಜಿ ಆಡುವ ಬದಲು, ಮೊದಲು ಕೆಲವು ರೆಡ್-ಬಾಲ್ ಪಂದ್ಯಗಳನ್ನು ಆಡಿ ಅಭ್ಯಾಸ ಮಾಡಲಿ ಎಂಬ ಉದ್ದೇಶದಿಂದ ಅವರನ್ನು ಆರಂಭಿಕ ಪಂದ್ಯಗಳಿಗೆ ಆಯ್ಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪವಾರ್ ತಿಳಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಶಾರ್ದೂಲ್ ಠಾಕೂರ್ ಔಟ್
ಮುಂಬೈ ತಂಡದ ಪ್ರಮುಖ ವೇಗದ ಬೌಲಿಂಗ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರ ಅಲಭ್ಯತೆಗೂ ರಾಜೇಶ್ ಪವಾರ್ ಕಾರಣ ನೀಡಿದ್ದಾರೆ. ಶಾರ್ದೂಲ್ ಅವರ ಬಲಗೈ ಮಧ್ಯದ ಬೆರಳಿಗೆ ಸಣ್ಣ ಮುರಿತ (ಫ್ರ್ಯಾಕ್ಚರ್) ಉಂಟಾಗಿದೆ. ಹೀಗಾಗಿ, ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ವಿಶ್ರಾಂತಿ ಪಡೆಯಬೇಕಿದೆ. ಇದೇ ಕಾರಣಕ್ಕಾಗಿ ಅವರನ್ನು ಆರಂಭಿಕ ಎರಡು ಪಂದ್ಯಗಳಿಂದ ಕೈಬಿಡಲಾಗಿದೆ. ಪ್ರಸ್ತುತ ಪ್ರಕಟಿಸಿರುವ ತಂಡ ಕೇವಲ ಮೊದಲ ಎರಡು ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದು, ಆ ನಂತರ ಶಾರ್ದೂಲ್ ಠಾಕೂರ್ ಅವರ ಫಿಟ್ನೆಸ್ ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.
ಯುವ ಪ್ರತಿಭೆಗಳಿಗೆ ಮಣೆ ಹಾಕಿದ ಮುಂಬೈ
ಈ ಬಾರಿಯ ರಣಜಿ ಋತುವಿನಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಹಾಗೂ ಜವಾಬ್ದಾರಿ ನೀಡುವ ಗುರಿಯನ್ನು ಮುಂಬೈ ಕ್ರಿಕೆಟ್ ಸಂಸ್ಥೆ ಹೊಂದಿದೆ. ನಾಯಕನಾಗಿ ಆಯ್ಕೆಯಾಗಿರುವ ಸಿದ್ದೇಶ್ ಲಾಡ್ ಅವರು ಕಳೆದ ಋತುವಿನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನ ಹಾಗೂ ಅವರ ಅಪಾರ ಅನುಭವದ ಆಧಾರದ ಮೇಲೆ ಈ ಸ್ಥಾನ ಪಡೆದಿದ್ದಾರೆ. ಇನ್ನು, ಉಪನಾಯಕನಾಗಿ ಆಯ್ಕೆಯಾಗಿರುವ ಆಯುಷ್ ಮ್ಹಾತ್ರೆ, 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರ ಬ್ಯಾಟಿಂಗ್ ಹಾಗೂ ನಾಯಕತ್ವದ ಕೌಶಲ್ಯವನ್ನು ಗುರುತಿಸಿ, ಭವಿಷ್ಯದ ನಾಯಕನನ್ನಾಗಿ ರೂಪಿಸುವ ಉದ್ದೇಶದಿಂದ ಈ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ರಾಜೇಶ್ ಪವಾರ್ ವಿವರಿಸಿದ್ದಾರೆ. ಒಟ್ಟಾರೆಯಾಗಿ, ಮುಂಬೈ ತಂಡವು ಅನುಭವಿಗಳ ಜೊತೆಗೆ ಯುವಕರನ್ನು ಬೆಳೆಸುವತ್ತ ಗಮನಹರಿಸಿದೆ.
ಇದನ್ನೂ ಓದಿ :ದೇಶೀಯ ಕ್ರಿಕೆಟ್‌ನಲ್ಲಿ ಮಹತ್ವದ ಬೆಳವಣಿಗೆ : ರೈಲ್ವೇಸ್ ತೊರೆದು ಗುಜರಾತ್ ತಂಡ ಸೇರಿದ ಸ್ಫೋಟಕ ಬ್ಯಾಟರ್ ಅಶುತೋಷ್ ಶರ್ಮಾ!


















