ಢಾಕಾ/ನವದೆಹಲಿ : ಬಾಂಗ್ಲಾದೇಶದ ರಾಜಕೀಯದಲ್ಲಿ ‘ಡಾರ್ಕ್ ಪ್ರಿನ್ಸ್’ ಎಂದೇ ಕುಖ್ಯಾತಿ ಮತ್ತು ಖ್ಯಾತಿಗಳೆರಡನ್ನೂ ಪಡೆದಿರುವ ಬಾಂಗ್ಲಾ ನ್ಯಾಷನಲಿಸ್ಟ್ ಪಾರ್ಟಿ (BNP) ನಾಯಕ ತಾರಿಕ್ ರೆಹಮಾನ್ ಬರೋಬ್ಬರಿ 17 ವರ್ಷಗಳ ನಂತರ ತಾಯ್ನಾಡಿಗೆ ಮರಳಿದ್ದಾರೆ. ಮಾಜಿ ಪ್ರಧಾನಿ ಖಾಲಿದಾ ಜಿಯಾ ಅವರ ಪುತ್ರನಾಗಿರುವ ತಾರಿಕ್ ಅವರ ಆಗಮನವು, ಹಿಂಸಾಚಾರದಿಂದ ನಲುಗಿರುವ ಬಾಂಗ್ಲಾದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಸುಮಾರು ಎರಡು ದಶಕಗಳ ಕಾಲ ಲಂಡನ್‌ನಲ್ಲಿ ಸ್ವಯಂ ಗಡಿಪಾರು ಶಿಕ್ಷೆ ಅನುಭವಿಸುತ್ತಿದ್ದ ತಾರಿಕ್, ಗುರುವಾರ ತಮ್ಮ ಪತ್ನಿ ಜುಬೈದಾ ಮತ್ತು ಮಗಳೊಂದಿಗೆ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. “ಸುದೀರ್ಘ 6,314 ದಿನಗಳ ನಂತರ ಬಾಂಗ್ಲಾದೇಶದಲ್ಲಿ!” ಎಂದು ಅವರು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.
ಲಕ್ಷಾಂತರ ಬೆಂಬಲಿಗರ ಸ್ವಾಗತ
ತಾರಿಕ್ ರೆಹಮಾನ್ ಅವರ ಸ್ವಾಗತಕ್ಕಾಗಿ ರಾಜಧಾನಿ ಢಾಕಾದಲ್ಲಿ ಜನಸಾಗರವೇ ಹರಿದುಬಂದಿತ್ತು. ಸುಮಾರು 50 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಈ ರ‍್ಯಾಲಿಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ದೇಶದ ವಿವಿಧ ಭಾಗಗಳಿಂದ 10 ವಿಶೇಷ ರೈಲುಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಆಗಮಿಸಿದ್ದರು. ಇದು ಮುಂಬರುವ ಫೆಬ್ರವರಿ ಚುನಾವಣೆಯ ದೃಷ್ಟಿಯಿಂದ ಬಿಎನ್‌ಪಿ ಪಾಲಿಗೆ ದೊಡ್ಡ ಶಕ್ತಿ ಪ್ರದರ್ಶನವಾಗಿದೆ.
ಭಾರತಕ್ಕೆ ಏಕೆ ಇದು ಶುಭ ಸುದ್ದಿ?
ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ, ಹಂಗಾಮಿ ಮುಖ್ಯಸ್ಥ ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಬಾಂಗ್ಲಾದೇಶವು ಭಾರತ ವಿರೋಧಿ ನಿಲುವು ತಳೆಯುತ್ತಿದ್ದು, ಪಾಕಿಸ್ತಾನದತ್ತ ವಾಲುತ್ತಿದೆ. ಇಂತಹ ಸಂದರ್ಭದಲ್ಲಿ ತಾರಿಕ್ ರೆಹಮಾನ್ ಆಗಮನ ಭಾರತದ ಪಾಲಿಗೆ ಮಹತ್ವದ್ದಾಗಿದೆ.
ಜಮಾತ್-ಎ-ಇಸ್ಲಾಮಿ ನಿಯಂತ್ರಣ | ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಮತ್ತು ಭಾರತ ವಿರೋಧಿ ನಿಲುವಿನ ‘ಜಮಾತ್-ಎ-ಇಸ್ಲಾಮಿ’ ಪಕ್ಷವು ಬಾಂಗ್ಲಾದಲ್ಲಿ ಪ್ರಬಲವಾಗುತ್ತಿದೆ. ಇದನ್ನು ತಡೆಯಲು ಬಿಎನ್‌ಪಿ ಮಾತ್ರ ಸಮರ್ಥ ಎಂಬುದು ಭಾರತದ ಲೆಕ್ಕಾಚಾರ.
ಸೌಹಾರ್ದದ ಮುನ್ಸೂಚನೆ | ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಸ್ವಸ್ಥರಾಗಿರುವ ಖಾಲಿದಾ ಜಿಯಾ ಅವರ ಆರೋಗ್ಯ ವಿಚಾರಿಸಿದಾಗ, ಬಿಎನ್‌ಪಿ ಕೃತಜ್ಞತೆ ಸಲ್ಲಿಸಿತ್ತು. ಇದು ಉಭಯ ದೇಶಗಳ ಸಂಬಂಧ ಸುಧಾರಣೆಯ ಮುನ್ಸೂಚನೆ ಎನ್ನಲಾಗಿದೆ.
ತಟಸ್ಥ ನಿಲುವು | ತಾರಿಕ್ ರೆಹಮಾನ್ ಅವರು ‘ಬಾಂಗ್ಲಾದೇಶ ಫಸ್ಟ್’ ನೀತಿಯನ್ನು ಪ್ರತಿಪಾದಿಸಿದ್ದು, “ನಾಟ್ ದಿಲ್ಲಿ, ನಾಟ್ ಪಿಂಡಿ (ರಾವಲ್ಪಿಂಡಿ/ಪಾಕಿಸ್ತಾನ)” ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೂ ಹತ್ತಿರವಾಗದ ತಟಸ್ಥ ನಿಲುವು ಪ್ರದರ್ಶಿಸಿದ್ದಾರೆ.
ಯಾರು ಈ ತಾರಿಕ್ ರೆಹಮಾನ್?
ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಾಲಿದಾ ಜಿಯಾ ಅವರ ಪುತ್ರನಾಗಿರುವ ತಾರಿಕ್, 2001-2006ರ ಅವಧಿಯ ಭ್ರಷ್ಟಾಚಾರದ ಆರೋಪಗಳಿಂದಾಗಿ ‘ಡಾರ್ಕ್ ಪ್ರಿನ್ಸ್’ ಎಂಬ ಹಣೆಪಟ್ಟಿ ಹೊತ್ತಿದ್ದರು. 2004ರ ಗ್ರೆನೇಡ್ ದಾಳಿ ಪ್ರಕರಣ ಸೇರಿದಂತೆ ಹಲವು ಕೇಸ್‌ಗಳಲ್ಲಿ ಅವರು ಶಿಕ್ಷೆಗೆ ಗುರಿಯಾಗಿದ್ದರು. ಆದರೆ, ಕಳೆದ ಒಂದು ವರ್ಷದಲ್ಲಿ ಅಲ್ಲಿನ ನ್ಯಾಯಾಲಯಗಳು ಅವರನ್ನು ಪ್ರಮುಖ ಪ್ರಕರಣಗಳಿಂದ ಖಲಾಸೆಗೊಳಿಸಿವೆ.
ಶೇಖ್ ಹಸೀನಾ ಅವರ ಅವಾಮಿ ಲೀಗ್ ಚುನಾವಣೆಯಿಂದ ದೂರ ಉಳಿದಿರುವ ಇಂದಿನ ಸನ್ನಿವೇಶದಲ್ಲಿ, ತಾರಿಕ್ ರೆಹಮಾನ್ ಅವರ ಬಿಎನ್‌ಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಇದು ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆಯ ಮೇಲೂ ಪರಿಣಾಮ ಬೀರಲಿದೆ.
ಇದನ್ನೂ ಓದಿ : ನೆಲಮಂಗಲ | ಮದುವೆಯಾಗಿ ತಿಂಗಳು ಕಳೆಯೋ ಮುನ್ನವೇ ನವ ವಿವಾಹಿತೆ ನಿಗೂಢ ಸಾವು..!



















