ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಿಂದ ಕೂಡ್ಲಿಗಿ ತಾಲೂಕಿನ ಆಲೂರುವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅವಘಡಗಳ ಸರಣಿ ಮುಂದುವರಿದಿದೆ. ದೇವಲಾಪುರ ಮತ್ತು ಡಣಾಯಕನಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ಹಾಗೂ ಫ್ಲೈಓವರ್ ನಿರ್ಮಿಸದ ಕಾರಣ ಜೀವ ಭಯದಲ್ಲೇ ಓಡಾಡುವಂತಾಗಿದೆ.
ಕೇವಲ 2022 ರಿಂದ 2025 ರವರೆಗೆ ಮರಿಯಮ್ಮನಹಳ್ಳಿ ವ್ಯಾಪ್ತಿಯೊಂದರಲ್ಲೇ ರಸ್ತೆ ಅಪಘಾತಕ್ಕೆ 100ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಹೊಲ-ಗದ್ದೆಗಳಿಗೆ ತೆರಳಲು ಹೆದ್ದಾರಿ ದಾಟಲೇಬೇಕಾದ ಅನಿವಾರ್ಯತೆಯಿದ್ದು, ಎತ್ತಿನ ಬಂಡಿ, ರೈತರು, ಶಾಲಾ ಮಕ್ಕಳು ಹಾಗೂ ವಯೋವೃದ್ಧರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವನ್ನು ಖಂಡಿಸಿರುವ ಗ್ರಾಮಸ್ಥರು ಹಾಗೂ ರೈತರು ಕೂಡಲೇ ಸರ್ವಿಸ್ ರಸ್ತೆ ಮತ್ತು ಫ್ಲೈಓವರ್ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


















