ಕೊಪ್ಪಳದ ಹನುಮ ಜನ್ಮ ಸ್ಥಳ ಅಂಜನಾದ್ರಿ ದೇವಸ್ಥಾನದ ಆಡಳಿತಾಧಿಕಾರಕ್ಕಾಗಿ ವಿದ್ಯಾದಾಸ್ ಬಾಬಾ ಹಾಗೂ ಜಿಲ್ಲಾಡಳಿತದ ನಡುವೆ ತೀವ್ರ ಜಟಾಪಟಿ ಮುಂದುವರಿದಿದೆ. ಹೈಕೋರ್ಟ್ ಆದೇಶದ ಮೇರೆಗೆ ದೇವಸ್ಥಾನದ ಸುಪರ್ದಿ ಪಡೆದಿದ್ದ ವಿದ್ಯಾದಾಸ ಬಾಬಾ ಹಾಕಿದ್ದ ಬೀಗಗಳನ್ನು ಮುರಿದು, ದೇವಸ್ಥಾನವನ್ನು ಮತ್ತೆ ವಶಕ್ಕೆ ಪಡೆಯಲು ಜಿಲ್ಲಾಡಳಿತದ ಅಧಿಕಾರಿಗಳು ಮುಂದಾಗಿದ್ದಾರೆ. ಎಸಿ, ತಹಸೀಲ್ದಾರ್ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಬೆಟ್ಟಕ್ಕೆ ಭೇಟಿ ನೀಡಿದ ಅಧಿಕಾರಿಗಳು, ದೇವಸ್ಥಾನದ 8 ಕಚೇರಿಗಳಿಗೆ ಹಾಕಿದ್ದ ಬೀಗಗಳನ್ನು ಒಡೆದು, ಬೆಟ್ಟದಲ್ಲಿದ್ದ ಟ್ರಸ್ಟ್ ಬ್ಯಾನರ್‌ಗಳನ್ನು ತೆರವುಗೊಳಿಸಿ ಬಾಬಾ ನೇಮಕ ಮಾಡಿಕೊಂಡ ಸಿಬ್ಬಂದಿಯನ್ನೂ ಹೊರಹಾಕಿದ್ದಾರೆ.
ಹೈಕೋರ್ಟ್ ಆದೇಶದಂತೆ ತಾವು ಸುಪರ್ದಿ ಪಡೆದಿರುವುದಾಗಿ ವಾದಿಸಿದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ, ಕೋರ್ಟ್ ಆದೇಶ ತೋರಿಸಿ ಕ್ರಮ ಕೈಗೊಳ್ಳುವಂತೆ ಪಟ್ಟುಹಿಡಿದು ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಬಾಬಾ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಭಾರೀ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಧಾರವಾಡ ಹೈಕೋರ್ಟ್ 2018ರ ಜಿಲ್ಲಾಧಿಕಾರಿ ಆದೇಶವನ್ನು ರದ್ದುಪಡಿಸಿದ್ದು, ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿರುವ ವಿದ್ಯಾದಾಸ ಬಾಬಾ ಈಗ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ, ದೇವಸ್ಥಾನದಲ್ಲಿ ಜಿಲ್ಲಾಡಳಿತದ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವಂತೆ ಎಸಿ ಸೂಚನೆ ನೀಡಿದ್ದು, ಸಂಘರ್ಷ ತೀವ್ರಗೊಂಡಿದೆ!



















