ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಭೀಕರ ಶಾಕ್ ನೀಡಿದ್ದು, 362 ಕೆಎಎಸ್ ಅಧಿಕಾರಿಗಳ ಭವಿಷ್ಯಕ್ಕೆ ಭಾರಿ ಸಂಕಷ್ಟ ಎದುರಾಗಿದೆ. 2011ನೇ ಬ್ಯಾಚ್ನ ಕೆಎಎಸ್ ಅಧಿಕಾರಿಗಳ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ರದ್ದುಪಡಿಸಿದ್ದು, 1 ಬಾರಿ ಮರು ಪರೀಕ್ಷೆ ನಡೆಸುವಂತೆ ಮಹತ್ವದ ಆದೇಶ ಹೊರಡಿಸಿದೆ. ಉದ್ಯೋಗಾಕಾಂಕ್ಷಿಗಳ ನೇಮಕಾತಿ ರಕ್ಷಣೆಗಾಗಿ 2022ರಲ್ಲಿ ರಾಜ್ಯ ಸರ್ಕಾರ ತಂದಿದ್ದ ಕಾಯ್ದೆಯನ್ನು ರದ್ದುಗೊಳಿಸಲಾಗಿದ್ದು, ಈ ಕಾಯ್ದೆ ರದ್ದುಪಡಿಸಲು ಹಿಂದೆ ನಿರಾಕರಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಮೂಲಕ 362 ಅಧಿಕಾರಿಗಳ ನೇಮಕಾತಿ ರಕ್ಷಣೆಗೆ ಭಾರಿ ಹಿನ್ನಡೆಯಾಗಿದ್ದು, ಕಳಂಕಿತರು ಮತ್ತು ಕಳಂಕಿತರಲ್ಲದವರನ್ನು ಪ್ರತ್ಯೇಕಿಸಬೇಕೆಂಬ ವಾದವನ್ನು ನ್ಯಾಯಾಲಯ ತೀವ್ರವಾಗಿ ತಿರಸ್ಕರಿಸಿದೆ. ಅರ್ಜಿ ಸಲ್ಲಿಸಿದವರಿಗೆ ಹಾಗೂ ಕಳಂಕಿತರಲ್ಲದವರಿಗೆ 1 ಬಾರಿ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಒಂದು ವೇಳೆ ಅವರು ಮತ್ತೆ ಆಯ್ಕೆಯಾದರೆ ಅವರ ಹಿಂದಿನ ಸೇವೆಯನ್ನು ಪರಿಗಣಿಸಿ ಯಾವುದೇ ಸೇವಾ ಜ್ಯೇಷ್ಠತೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

















