ಬೆಂಗಳೂರಿನಲ್ಲಿ ಬಿಡಿಎ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅನಧಿಕೃತ ನಿವೇಶನಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಅರಕೆರೆಯ ಶಾಂತಿನಿಕೇತನ ಖಾಸಗಿ ಬಡಾವಣೆಯಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆದಿದೆ.
ಬಿಡಿಎ ಅಧೀಕ್ಷಕರು, ಎಇ, ಎಇಇ ಮತ್ತು ಪೊಲೀಸ್ ಸಿಬ್ಬಂದಿಯ ದಂಡು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಬರೋಬ್ಬರಿ 1 ಎಕರೆ 10 ಗುಂಟೆ ವಿಸ್ತೀರ್ಣದ ಸಿಎ ಸೈಟ್ ಅನ್ನು ಅಕ್ರಮ ಮುಕ್ತಗೊಳಿಸಿದೆ. ಸುಮಾರು 50 ಕೋಟಿ ರೂಪಾಯಿ ಬೆಲೆ ಬಾಳುವ ಈ ಮೌಲ್ಯಯುತ ಜಾಗವನ್ನು ವಶಕ್ಕೆ ಪಡೆಯಲು ಮೂರಕ್ಕೂ ಹೆಚ್ಚು ಜೆಸಿಬಿ ಯಂತ್ರಗಳು ಅಖಾಡಕ್ಕಿಳಿದಿದ್ದವು. ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದುಬಸ್ತು ನಿಯೋಜಿಸಲಾಗಿತ್ತು. ನೆಲಸಮಗೊಂಡ ನಿವೇಶನಗಳ ಅವಶೇಷಗಳನ್ನು ಸಾಗಿಸಲು ಹತ್ತಕ್ಕೂ ಹೆಚ್ಚು ಲಾರಿಗಳನ್ನು ಬಳಸಲಾಗಿದ್ದು, ಬಿಡಿಎ ವ್ಯಾಪ್ತಿಯ ಹಲವೆಡೆ ಅಕ್ರಮ ಸೈಟ್ಗಳಿಗೆ ಈಗ ನಡುಕ ಶುರುವಾಗಿದೆ.

















