ಉಡುಪಿ : ಮಕ್ಕಳು ಇಂದು ಮೊಬೈಲ್ ಫೋನ್‌ಗಳಿಗೆ ಅತಿಯಾಗಿ ದಾಸರಾಗುತ್ತಿದ್ದು, ಅವರ ನೈಸರ್ಗಿಕ ಬೌದ್ಧಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಈ ಸಮಸ್ಯೆಯನ್ನು ಮನಗಂಡು ಮಕ್ಕಳನ್ನು ಮೊಬೈಲ್ ಫೋನ್ ಚಟದಿಂದ ಮುಕ್ತಗೊಳಿಸಲು ಪುತ್ತಿಗೆ ಮಠ ವತಿಯಿಂದ ಮೇ 14ರಿಂದ ಮೊಬೈಲ್ ವರ್ಜನ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
6 ರಿಂದ 12 ವರ್ಷ ವಯಸ್ಸಿನೊಳಗಿನ ಮಕ್ಕಳಿಗಾಗಿ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದ ಪರಿಸರದಲ್ಲಿ ನಾಲ್ಕು ದಿನಗಳ ಶಿಬಿರ ನಡೆಯಲಿದೆ. ಮೇ 14 ರಿಂದ 18ರವರೆಗೆ ನಡೆಯುವ ಶಿಬಿರದಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಬಳಸದಂತೆ ನಿರ್ಬಂಧ ವಿಧಿಸಿ, ಅದಕ್ಕೆ ಬದಲಾಗಿ ದೇಸಿ ಕ್ರೀಡೆಗಳು, ಸಾಂಪ್ರದಾಯಿಕ ಆಟಗಳು ಮತ್ತು ಆಧ್ಯಾತ್ಮಿಕ- ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಲಾಗುತ್ತದೆ.
ಮೊಬೈಲ್ ಫೋನ್ ಇಲ್ಲದೆಯೂ ಸಂತೋಷದಿಂದ ಇರಲು ಸಾಧ್ಯವಿದೆ ಎಂಬ ವಾಸ್ತವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಈ ಶಿಬಿರದ ಮೂಲ ಉದ್ದೇಶವಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಕ್ಕಳ ಪೋಷಕರು ಮೇ 10ರೊಳಗಾಗಿ ತಮ್ಮ ಅರ್ಜಿಯನ್ನು ಉಡುಪಿಯ ಗೀತಾ ಮಂದಿರ ಕಾರ್ಯಾಲಯದಲ್ಲಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ : ಹೊಸ ಬೈಕ್ ತೆಗೆದುಕೊಂಡ ದಿನವೇ ಕಳ್ಳತನ.. ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ!



















