ನವದೆಹಲಿ : ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ನಿಮಗೆ ಎಂಜಿನಿಯರ್‌ಗಳಿಗಿಂತ ಹೆಚ್ಚಾಗಿ ಪ್ಲಂಬರ್, ಎಲೆಕ್ಟ್ರಿಷಿಯನ್ ಹಾಗೂ ಕಾರ್ಪೆಂಟರ್‌ಗಳ ತೀವ್ರ ಕೊರತೆ ಎದುರಾಗಬಹುದಂತೆ. ಸ್ವತಃ ಆರ್ಥಿಕ ತಜ್ಞರೇ ಇಂಥದ್ದೊಂದು ಆತಂಕಕಾರಿ ಮುನ್ಸೂಚನೆಯನ್ನು ನೀಡಿದ್ದಾರೆ. ಶ್ರೀಮಂತ ಹಾಗೂ ಮುಂದುವರಿದ ರಾಷ್ಟ್ರಗಳಲ್ಲಿ ಉಂಟಾಗಿರುವ ಜನಸಂಖ್ಯಾ ಕುಸಿತ ಮತ್ತು ವಯೋವೃದ್ಧರ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ, ಅಲ್ಲಿನ ಸರ್ಕಾರಗಳು ಭಾರತದ ಬ್ಲೂ-ಕಾಲರ್ (ದೈಹಿಕ ಶ್ರಮದ/ನುರಿತ ತಾಂತ್ರಿಕ) ಕಾರ್ಮಿಕರನ್ನು ಭಾರಿ ಪ್ರಮಾಣದಲ್ಲಿ ಆಕರ್ಷಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಕೆನಡಾ ಮೂಲದ ಮ್ಯಾಕ್ರೋ ಟ್ರೆಂಡ್ಸ್ ಸಂಶೋಧನಾ ಸಂಸ್ಥೆಯಾದ ‘ಪೈನ್‌ಟ್ರೀ’ ಸಂಸ್ಥಾಪಕ ರಿತೇಶ್ ಜೈನ್ ಈ ಕುರಿತು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.
ಮುಂದುವರಿದ ದೇಶಗಳಲ್ಲಿ ಜನಸಂಖ್ಯಾ ಬಿಕ್ಕಟ್ಟು
ಪ್ರಸ್ತುತ ಯುರೋಪ್, ಉತ್ತರ ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ಶ್ರೀಮಂತ ರಾಷ್ಟ್ರಗಳು ಗಂಭೀರ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿವೆ. ಜನನ ಪ್ರಮಾಣ ಕುಸಿಯುತ್ತಿದ್ದು, ವೃದ್ಧರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ಜಗತ್ತಿನ ಶೇ.60ಕ್ಕಿಂತ ಹೆಚ್ಚು ಜನಸಂಖ್ಯೆಯು ಪ್ರಸ್ತುತ ಸ್ಥಿರ ಜನಸಂಖ್ಯೆಗೆ ಅಗತ್ಯವಿರುವ ಮರುಉತ್ಪಾದನಾ ದರಕ್ಕಿಂತ ಕಡಿಮೆ ಇರುವ ದೇಶಗಳಲ್ಲಿ ವಾಸಿಸುತ್ತಿದೆ.
ಜರ್ಮನಿಯಲ್ಲಿ ಶೇ.80ಕ್ಕೂ ಹೆಚ್ಚು ಉದ್ಯೋಗದಾತರು ಸೂಕ್ತ ಕಾರ್ಮಿಕರು ಸಿಗದೆ ಪರದಾಡುತ್ತಿದ್ದರೆ, ಅಮೆರಿಕದಲ್ಲಿ ಮುಂಬರುವ ದಿನಗಳಲ್ಲಿ ಲಕ್ಷಾಂತರ ಪ್ಲಂಬರ್‌ಗಳ ಕೊರತೆ ಉಂಟಾಗುವ ಅಂದಾಜಿದೆ. ಕಟ್ಟಡ ನಿರ್ಮಾಣ, ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ವೃದ್ಧರ ಆರೈಕೆ (ಕೇರ್‌ಗಿವರ್ಸ್) ಕ್ಷೇತ್ರಗಳಲ್ಲಿ ನಿವೃತ್ತರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಆ ಸ್ಥಾನಗಳನ್ನು ತುಂಬಲು ಅಲ್ಲಿನ ಯುವ ಪೀಳಿಗೆ ಸಿದ್ಧವಿಲ್ಲದಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಕಂದಕವನ್ನು ಸೃಷ್ಟಿಸಿದೆ.
ವೀಸಾ ನೀತಿಯಲ್ಲಿ ಬದಲಾವಣೆ: ನುರಿತ ಉದ್ಯೋಗಿಗಳಿಗೆ ಮಣೆ
ಹಿಂದಿನಂತೆ ಎಲ್ಲರಿಗೂ ಮುಕ್ತವಾಗಿ ವಲಸೆಗೆ ಅವಕಾಶ ನೀಡಲು ಈಗ ಪಾಶ್ಚಿಮಾತ್ಯ ದೇಶಗಳು ಸಿದ್ಧವಿಲ್ಲ. ವಲಸಿಗರು ತಮ್ಮ ಸಂಸ್ಕೃತಿಯೊಂದಿಗೆ ಬೆರೆಯುತ್ತಿಲ್ಲ ಎಂಬ ರಾಜಕೀಯ ಮತ್ತು ಸಾಮಾಜಿಕ ಅಸಮಾಧಾನಗಳು ಅಲ್ಲಿ ಭುಗಿಲೇಳುತ್ತಿವೆ. ಹೀಗಾಗಿ, ಶ್ರೀಮಂತ ರಾಷ್ಟ್ರಗಳು ಈಗ ‘ಆಯ್ದ ಆರ್ಥಿಕ ವಲಸೆ’ ನೀತಿಯನ್ನು ಅಳವಡಿಸಿಕೊಳ್ಳುತ್ತಿವೆ. ಅಂದರೆ, ಕೇವಲ ತಮ್ಮ ದೇಶಕ್ಕೆ ಅಗತ್ಯವಿರುವ ಪ್ಲಂಬರ್, ವೆಲ್ಡರ್, ನರ್ಸ್ ಹಾಗೂ ಚಾಲಕರಂತಹ ನುರಿತ ವೃತ್ತಿಪರರಿಗೆ ಮಾತ್ರ ವೇಗದ ಗತಿಯಲ್ಲಿ ವೀಸಾ ನೀಡಲು ಮುಂದಾಗುತ್ತಿವೆ. ಯುವ ಜನಸಂಖ್ಯೆ ಹೆಚ್ಚಿರುವ ಮತ್ತು ಈಗಾಗಲೇ ಗಲ್ಫ್ ಹಾಗೂ ಯುರೋಪ್ ದೇಶಗಳಿಗೆ ಕಾರ್ಮಿಕರನ್ನು ರಫ್ತು ಮಾಡುತ್ತಿರುವ ಭಾರತವೇ ಈಗ ಈ ದೇಶಗಳ ಮೊದಲ ಆಯ್ಕೆಯಾಗಿದೆ.
ಭಾರತದಲ್ಲಿ ಎದುರಾಗಲಿದೆ ವಿಚಿತ್ರ ನಿರುದ್ಯೋಗ ಬಿಕ್ಕಟ್ಟು
ಜಾಗತಿಕ ಮಾರುಕಟ್ಟೆಯಲ್ಲಿ ಬ್ಲೂ-ಕಾಲರ್ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗುತ್ತಿದ್ದರೆ, ಭಾರತದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ವಾತಾವರಣ ನಿರ್ಮಾಣವಾಗಿದೆ. ಭಾರತದಲ್ಲಿ ಪದವಿ ಹಾಗೂ ಉನ್ನತ ಶಿಕ್ಷಣ ಮುಗಿಸಿದ ಶೇ.40 ರಷ್ಟು ಯುವಕರು ವೈಟ್-ಕಾಲರ್ (ಕಚೇರಿ ಉದ್ಯೋಗ) ಕೆಲಸ ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಶಿಕ್ಷಣ ಮುಗಿಸಿದ ಮೊದಲ ವರ್ಷದಲ್ಲೇ ಖಾಯಂ ಉದ್ಯೋಗ ಸಿಗುತ್ತಿರುವುದು ಕೇವಲ 14ರಲ್ಲಿ ಒಬ್ಬರಿಗೆ ಮಾತ್ರ. ಮತ್ತೊಂದೆಡೆ, ದೇಶದ ಒಳಗೂ ಮುಂದಿನ ದಿನಗಳಲ್ಲಿ ತಾಂತ್ರಿಕ ಕೌಶಲ್ಯವಿರುವ ಕಾರ್ಮಿಕರ ಅಗತ್ಯತೆ ಹೆಚ್ಚಾಗಲಿದೆ. ಆದರೆ ಭಾರತದಲ್ಲಿ ಲಭ್ಯವಿರುವ ಇಂತಹ ಉದ್ಯೋಗಗಳು ಅಸಂಘಟಿತವಾಗಿದ್ದು, ಕಡಿಮೆ ವೇತನ ಹಾಗೂ ಸುರಕ್ಷತೆಯ ಕೊರತೆಯಿಂದ ಕೂಡಿರುವುದರಿಂದ ಸ್ಥಳೀಯ ಯುವಕರು ಇತ್ತ ಆಕರ್ಷಿತರಾಗುತ್ತಿಲ್ಲ.
ಆತಂಕಕಾರಿ ಭವಿಷ್ಯದ ಮುನ್ಸೂಚನೆ
ಒಟ್ಟಾರೆ ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸಿರುವ ರಿತೇಶ್ ಜೈನ್, ಭಾರತದ ಭವಿಷ್ಯದ ಶ್ರಮ ಮಾರುಕಟ್ಟೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಭಾರತದ ಅತ್ಯುತ್ತಮ ಪ್ಲಂಬರ್‌ಗಳು, ಡ್ರೈವರ್‌ಗಳು, ನರ್ಸ್‌ಗಳು ಉತ್ತಮ ಸಂಬಳದ ಆಸೆಗೆ ವಿದೇಶಗಳಿಗೆ ವಲಸೆ ಹೋಗುವುದು ನಿಶ್ಚಿತ. ಇದರ ಪರಿಣಾಮವಾಗಿ ಭಾರತದಲ್ಲಿ ದೈನಂದಿನ ಅಗತ್ಯ ಕೆಲಸಗಳಿಗೆ ಜನ ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು. ಆದರೆ, ಅದೇ ಸಮಯದಲ್ಲಿ ಭಾರತದಲ್ಲಿ ಪದವಿ ಪ್ರಮಾಣಪತ್ರಗಳನ್ನು ಕೈಯಲ್ಲಿ ಹಿಡಿದು, ದೇಶದಲ್ಲೂ ಕೆಲಸವಿಲ್ಲದೆ ಮತ್ತು ವಿದೇಶಗಳಲ್ಲೂ ಬೇಡಿಕೆಯಿಲ್ಲದ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಕರು ಮಾತ್ರ ಬಾಕಿ ಉಳಿಯಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ATMಗಳಲ್ಲಿ ನಿಮಗೆ ಹಣ ಸಿಗದಿದ್ದರೆ ಬ್ಯಾಂಕ್ ನಿತ್ಯ 100 ರೂ. ದಂಡ ಪಾವತಿಸಬೇಕು : ಏನಿದು ನಿಯಮ?



















