ಕಾಸರಗೋಡು : ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಶಾಲೆಯ ಆವರಣ ಗೋಡೆ ಏಕಾಏಕಿ ಕುಸಿದು ಬಿದ್ದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಸರಗೋಡಿನ ಕಾಞ್ಞಂಗಾಡ್‌ನ ಯುಬಿಎಂಸಿ (UBMC) ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ನೋಡ ನೋಡುತ್ತಿದ್ದಂತೆಯೇ ಶಾಲೆಯ ಆವರಣದ ಕಾಂಪೌಂಡ್ ಗೋಡೆ ಸಂಪೂರ್ಣವಾಗಿ ಧರೆಗುರುಳಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಮಧ್ಯಾಹ್ನದ ಊಟದ ವಿರಾಮ ಮುಗಿಸಿ ವಿದ್ಯಾರ್ಥಿಗಳು ತರಗತಿಗಳಿಗೆ ವಾಪಸಾದ ಕೆಲವೇ ಕ್ಷಣಗಳ ಬಳಿಕ ಗೋಡೆ ಕುಸಿದಿರುವುದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಘಟನೆ ವೇಳೆ ಗೋಡೆಯ ಸಮೀಪ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಭಾರೀ ಮಳೆಯಿಂದ ಗೋಡೆ ದುರ್ಬಲಗೊಂಡಿದ್ದೇ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ ; ಕರಾವಳಿ ಸೇರಿ 19 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ : 3 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!


















