ಬೆಂಗಳೂರು : ಜನಪ್ರಿಯ ವಾಹನ ತಯಾರಕ ಕಂಪನಿಯಾದ ರೆನಾಲ್ಟ್, ಬ್ರೆಜಿಲ್ ಮಾರುಕಟ್ಟೆಗಾಗಿ ತನ್ನ ಜನಮೆಚ್ಚಿದ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಅನಾವರಣಗೊಳಿಸಿದೆ. ಈ ಹೊಸ ಆವೃತ್ತಿಯು ಸಂಪೂರ್ಣ ಹೊಸದಾದ ಒಳಾಂಗಣ ಮತ್ತು ಕೆಲವು ಆಕರ್ಷಕ ಬಾಹ್ಯ ಬದಲಾವಣೆಗಳನ್ನು ಪಡೆದುಕೊಂಡಿದೆ. ಬ್ರೆಜಿಲ್ ಮಾರುಕಟ್ಟೆಯಲ್ಲಿ ಕ್ವಿಡ್ ಫೇಸ್‌ಲಿಫ್ಟ್ ಎವಲ್ಯೂಷನ್, ಟೆಕ್ನೊ ಮತ್ತು ಔಟ್‌ಸೈಡರ್ ಎಂಬ ಮೂರು ಟ್ರಿಮ್‌ಗಳಲ್ಲಿ ಲಭ್ಯವಾಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಇತ್ತೀಚೆಗಷ್ಟೇ ನವೀಕೃತಗೊಂಡು ಬಿಡುಗಡೆಯಾಗಿದ್ದ ಕ್ವಿಡ್ ಮಾದರಿಗೆ ಹೋಲಿಸಿದರೆ ಬ್ರೆಜಿಲಿಯನ್ ಆವೃತ್ತಿಯು ಸಾಕಷ್ಟು ಪ್ರೀಮಿಯಂ ನವೀಕರಣಗಳನ್ನು ಪಡೆದುಕೊಂಡಿದೆ.
ಹೊಸ ಕ್ವಿಡ್‌ನ ಮುಂಭಾಗದ ವಿನ್ಯಾಸವನ್ನು ಗಮನಿಸಿದರೆ, ಇದು ಭಾರತದಲ್ಲಿ ಲಭ್ಯವಿರುವ ರೆನಾಲ್ಟ್ ಕಿಗರ್ ಮಾದರಿಯನ್ನು ಹೋಲುವಂತಹ ಲಂಬವಾದ ಸ್ಲ್ಯಾಟ್‌ಗಳಿರುವ ಹೊಸ ಗ್ರಿಲ್ ಅನ್ನು ಹೊಂದಿದೆ. ಇದರ ಜೊತೆಗೆ ಹೊಸದಾದ ತ್ರಿಡಿ (3D) ರೆನಾಲ್ಟ್ ಲೋಗೊ, ಎಲ್ಇಡಿ ಡಿಆರ್‌ಎಲ್ ಬಾರ್‌ಗಳು ಹಾಗೂ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಮುಂಭಾಗದ ಬಂಪರ್‌ಗೆ ಅತ್ಯಂತ ಆಕ್ರಮಣಕಾರಿ ಹಾಗೂ ಸ್ಪೋರ್ಟಿ ಲುಕ್ ನೀಡಲಾಗಿದ್ದು, ಕಪ್ಪಾದ ಅಂಶಗಳು ಕಾರಿನ ಅಂದವನ್ನು ಹೆಚ್ಚಿಸಿವೆ. ಅಲ್ಲದೆ, ಭಾರತೀಯ ಮಾದರಿಯಲ್ಲಿರುವ ಸಾಧಾರಣ 14-ಇಂಚಿನ ಸ್ಟೀಲ್ ವೀಲ್‌ಗಳ ಬದಲಾಗಿ, ಬ್ರೆಜಿಲ್ ಆವೃತ್ತಿಗೆ 14-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಪರಿಷ್ಕೃತ ವಿನ್ಯಾಸದ ಎಲ್ಇಡಿ ಟೈಲ್-ಲೈಟ್‌ಗಳನ್ನು ನೀಡಲಾಗಿದ್ದರೂ, ಟೈಲ್‌ಗೇಟ್ ಹಾಗೂ ಬಂಪರ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ನವೀಕರಿಸಿದ ಕ್ಯಾಬಿನ್ ಮತ್ತು ಸುಧಾರಿತ ತಂತ್ರಜ್ಞಾನ
ಹೊಸ ಬ್ರೆಜಿಲ್-ಸ್ಪೆಕ್ ಕ್ವಿಡ್‌ನ ಅತ್ಯಂತ ಪ್ರಮುಖ ಬದಲಾವಣೆ ಅದರ ಕ್ಯಾಬಿನ್‌ನಲ್ಲಿದೆ. ಕಾರಿನ ಒಳಾಂಗಣ ವಿನ್ಯಾಸವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಡ್ಯಾಶ್‌ಬೋರ್ಡ್ ಎರಡು ಹೊಸ ಸ್ಕ್ರೀನ್‌ಗಳನ್ನು ಪಡೆದುಕೊಂಡಿದೆ. ಚಾಲಕನಿಗಾಗಿ 7-ಇಂಚಿನ ಡಿಜಿಟಲ್ ಡಿಸ್‌ಪ್ಲೇ ಹಾಗೂ ಮನರಂಜನೆಗಾಗಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡಲಾಗಿದೆ. ಭಾರತೀಯ ಮಾದರಿಯು ಕೇವಲ ೮-ಇಂಚಿನ ಸ್ಕ್ರೀನ್ ಹೊಂದಿದ್ದರೆ, ಬ್ರೆಜಿಲ್ ಮಾದರಿಯು ದೊಡ್ಡದಾದ ಮತ್ತು ಪ್ರೀಮಿಯಂ ಲುಕ್ ನೀಡುವ ಸ್ಕ್ರೀನ್ ಅನ್ನು ಪಡೆದಿದೆ. ಹೊಸ ಡ್ಯಾಶ್‌ಬೋರ್ಡ್ ಹಾರ್ಡ್ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದ್ದರೂ ಸಹ ಒಳಗಿನ ವಿನ್ಯಾಸವು ಸಾಕಷ್ಟು ಸ್ವಚ್ಛ ಹಾಗೂ ಆಕರ್ಷಕವಾಗಿ ಮೂಡಿಬಂದಿದೆ. ಇದರ ಜೊತೆಗೆ ಮ್ಯಾನ್ಯುವಲ್ ಎಸಿ, ಎರಡು ಟೈಪ್-ಸಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು ಹಾಗೂ ಎಲೆಕ್ಟ್ರಾನಿಕ್ ಆಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಿಯರ್‌ವ್ಯೂ ಮಿರರ್‌ಗಳನ್ನು ಸಹ ಒಳಗೊಂಡಿದೆ.
ಸುರಕ್ಷತಾ ವೈಶಿಷ್ಟ್ಯಗಳು ಹಾಗೂ ಬೂಟ್ ಸ್ಪೇಸ್
ಸುರಕ್ಷತೆಯ ದೃಷ್ಟಿಯಿಂದ ಹೊಸ ಕ್ವಿಡ್‌ನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇದರೊಂದಿಗೆ ಹಿಲ್-ಸ್ಟಾರ್ಟ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸೆನ್ಸರ್‌ಗಳು ಹಾಗೂ ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಸೇರಿಸಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಭಾರತೀಯ ಮಾದರಿಯ ಟಾಪ್-ಸ್ಪೆಕ್ ಕ್ಲೈಂಬರ್ ಆವೃತ್ತಿಯು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಬ್ರೆಜಿಲ್ ಮಾದರಿಯು ಭಾರತೀಯ ಮಾದರಿಯಂತೆಯೇ ೨,೪೨೩ ಎಂಎಂ ವೀಲ್‌ಬೇಸ್ ಮತ್ತು 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದರೂ, 290 ಲೀಟರ್‌ಗಳಷ್ಟು ದೊಡ್ಡ ಬೂಟ್ ಸ್ಪೇಸ್ ಒಳಗೊಂಡಿದೆ. ಇದು ಭಾರತದಲ್ಲಿ ಮಾರಾಟವಾಗುತ್ತಿರುವ ಕ್ವಿಡ್‌ಗಿಂತ 11 ಲೀಟರ್‌ಗಳಷ್ಟು ಹೆಚ್ಚಾಗಿದೆ.
ಎಂಜಿನ್ ಸಾಮರ್ಥ್ಯ ಮತ್ತು ಭಾರತೀಯ ಮಾರುಕಟ್ಟೆಯಲ್ಲಿನ ಸ್ಥಿತಿಗತಿ
ಯಾಂತ್ರಿಕವಾಗಿ, ಬ್ರೆಜಿಲ್-ಸ್ಪೆಕ್ ರೆನಾಲ್ಟ್ ಕ್ವಿಡ್ 1-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಎಥೆನಾಲ್ ಮೂಲಕ ಚಲಾಯಿಸಿದಾಗ 21 ಎಚ್‌ಪಿ ಪವರ್ ಮತ್ತು 98 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, ಪೆಟ್ರೋಲ್‌ನಲ್ಲಿ 68 ಎಚ್‌ಪಿ ಮತ್ತು 92 ಎನ್‌ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗಿದ್ದು, ಭಾರತದಲ್ಲಿರುವಂತೆ ಎಎಮ್‌ಟಿ (AMT) ಆಯ್ಕೆಯನ್ನು ಕೈಬಿಡಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕ್ವಿಡ್ ಮಾದರಿಯನ್ನು ಕಳೆದ ತಿಂಗಳಷ್ಟೇ ನವೀಕರಿಸಿ ಬಿಡುಗಡೆ ಮಾಡಿದ್ದರಿಂದಾಗಿ, ಬ್ರೆಜಿಲ್ ಆವೃತ್ತಿಯಲ್ಲಿನ ಈ ಹೊಸ ಬದಲಾವಣೆಗಳು ಸದ್ಯಕ್ಕೆ ಭಾರತಕ್ಕೆ ಬರುವ ಸಾಧ್ಯತೆಗಳು ತೀರಾ ವಿರಳ. ಪ್ರಸ್ತುತ ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎವಲ್ಯೂಷನ್ ಹಾಗೂ ಕ್ಲೈಂಬರ್ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದ್ದು, ಇದರ ಬೆಲೆ ೪.೫೩ ಲಕ್ಷದಿಂದ ೫.೬೧ ರೂ. ಲಕ್ಷಗಳವರೆಗೆ (ಎಕ್ಸ್‌ಶೋರೂಂ) ನಿಗದಿಯಾಗಿದೆ.
ಇದನ್ನೂ ಓದಿ : ನ್ಯೂಜಿಲೆಂಡ್ ಸರಣಿಗೂ ಮುನ್ನವೇ ಭರ್ಜರಿ ಸಿದ್ಧತೆ : ಆಕಿಬ್‌ಗೆ ‘ಕೌಂಟಿ’ ಆಡಲು ಅವಕಾಶ ಕಲ್ಪಿಸಲು ಮುಂದಾದ BCCI



















