ಮುಂಬೈ: ಅಮೆರಿಕ-ಇರಾನ್ ಯುದ್ಧ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಹಣಕಾಸು ನೀತಿ ಪರಾಮರ್ಶೆ ಸಭೆ ಮುಕ್ತಾಯವಾಗಿದ್ದು, ಆರ್‌ಬಿಐ ತನ್ನ ಪ್ರಮುಖ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇ.5.25ರಲ್ಲೇ ಮುಂದುವರಿಸಲು ನಿರ್ಧರಿಸಿದೆ. ಇದರಿಂದಾಗಿ ಮಾಸಿಕ ಇಎಂಐ (EMI) ಹೆಚ್ಚಳದ ಆತಂಕದಲ್ಲಿದ್ದ ಗೃಹ ಸಾಲಗಾರರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದು, ಹಣಕಾಸು ನೀತಿ ಸಮಿತಿಯು (MPC) ಸರ್ವಾನುಮತದಿಂದ ರೆಪೋ ದರವನ್ನು ಸ್ಥಿರವಾಗಿಡಲು ಮತ್ತು ತನ್ನ ‘ತಟಸ್ಥ’ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಹಲವು ಅನಿಶ್ಚಿತತೆಗಳ ನಡುವೆ ಆರ್‌ಬಿಐ ಈ ಸಮತೋಲಿತ ನಿರ್ಧಾರ ಕೈಗೊಂಡಿದೆ. ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ (ಪಶ್ಚಿಮ ಏಷ್ಯಾ) ಮುಂದುವರಿದಿರುವ ಸಂಘರ್ಷಗಳು ಮತ್ತು ಭಾರತದ ಮುಂಗಾರು ಮಳೆಯ ಮೇಲೆ ‘ಎಲ್ ನಿನೋ’ ಬೀರಬಹುದಾದ ಪರಿಣಾಮಗಳು ದೇಶದ ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಆತಂಕವಿವೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಮಾರುಕಟ್ಟೆಯ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಆರ್‌ಬಿಐ ಮುಖ್ಯ ಉದ್ದೇಶವಾಗಿದೆ.
ಇಎಂಐ ಮೇಲೆ ಏನು ಪರಿಣಾಮ?
ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ಇದರಲ್ಲಿ ಬದಲಾವಣೆಯಾದಾಗ ಬ್ಯಾಂಕುಗಳು ಸಹ ತಮ್ಮ ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸುತ್ತವೆ. ಸದ್ಯ ರೆಪೋ ದರ ಸ್ಥಿರವಾಗಿರುವುದರಿಂದ, ಗೃಹ ಸಾಲಗಾರರ ಮಾಸಿಕ ಇಎಂಐನಲ್ಲಿ ತಕ್ಷಣಕ್ಕೆ ಯಾವುದೇ ಬದಲಾವಣೆಗಳಾಗುವುದಿಲ್ಲ. ವಿಶೇಷವಾಗಿ ಫ್ಲೋಟಿಂಗ್ ದರದ (Floating-rate) ಗೃಹ ಸಾಲ ಹೊಂದಿರುವವರ ಮಾಸಿಕ ಪಾವತಿಗಳು ಸದ್ಯಕ್ಕೆ ಯಥಾಸ್ಥಿತಿಯಲ್ಲಿರಲಿವೆ. ಬ್ಯಾಂಕುಗಳು ಸ್ವತಂತ್ರವಾಗಿ ತಮ್ಮ ಬಡ್ಡಿದರ ಬದಲಾಯಿಸದ ಹೊರತು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಇದು ಹೊಸದಾಗಿ ಮನೆ ಖರೀದಿಸಲು ಯೋಜಿಸುತ್ತಿರುವವರಿಗೂ ಸಾಲದ ವೆಚ್ಚ ಸದ್ಯಕ್ಕೆ ಹೆಚ್ಚಾಗುವುದಿಲ್ಲ ಎಂಬ ಭರವಸೆ ನೀಡಿದೆ.
ಭವಿಷ್ಯದಲ್ಲಿ ಬಡ್ಡಿದರ ಕಡಿತದ ನಿರೀಕ್ಷೆ
ಕೇಂದ್ರ ಬ್ಯಾಂಕ್ ಸದ್ಯಕ್ಕೆ ಬಡ್ಡಿದರ ಏರಿಕೆಗೆ ಬ್ರೇಕ್ ಹಾಕಿದ್ದರೂ, ಮುಂಬರುವ ದಿನಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಬಡ್ಡಿದರ ಕಡಿತದ ಸಾಧ್ಯತೆಗಳು ಮುಕ್ತವಾಗಿವೆ ಎಂದು ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ನಿಯೋಲಿವ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಮೋಹಿತ್ ಮಲ್ಹೋತ್ರಾ, “ಆರ್‌ಬಿಐ ನಿರ್ಧಾರವು ಆರ್ಥಿಕ ಸ್ಥಿರತೆಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಬಡ್ಡಿದರ ಕಡಿಮೆಯಾದರೆ ಅದು ಮಧ್ಯಮ ವರ್ಗದ ವಸತಿ ಯೋಜನೆಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಲು ನೆರವಾಗುತ್ತದೆ, ಇದು ಜನರ ಸ್ವಂತ ಮನೆಯ ಕನಸನ್ನು ನನಸು ಮಾಡಲು ಉತ್ತೇಜನ ನೀಡಲಿದೆ” ಎಂದಿದ್ದಾರೆ.
ಗ್ರಾಹಕರಲ್ಲಿ ಹೆಚ್ಚಿದ ವಿಶ್ವಾಸ
ಬಡ್ಡಿದರ ಕಡಿಮೆ ಆಗದಿದ್ದರೂ, ಸದ್ಯ ಇರುವ ದರಗಳೇ ಸ್ಥಿರವಾಗಿ ಮುಂದುವರಿಯುವುದು ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮತ್ತು ಗ್ರಾಹಕರು ತಮ್ಮ ಹಣಕಾಸಿನ ಯೋಜನೆಗಳನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಅನಂತ್ ರಾಜ್ ಲಿಮಿಟೆಡ್‌ನ ನಿರ್ದೇಶಕ ಮತ್ತು ಸಿಇಒ ಅಮನ್ ಸರಿನ್ ಮಾತನಾಡಿ, “ಜಾಗತಿಕ ಉದ್ವಿಗ್ನತೆಯಿಂದಾಗಿ ಇನ್‌ಪುಟ್ ವೆಚ್ಚಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಆರ್‌ಬಿಐನ ಈ ಕ್ರಮ ಸ್ವಾಗತಾರ್ಹ. ಮನೆ ಖರೀದಿದಾರರಿಗೆ ಬಡ್ಡಿದರ ಕಡಿಮೆಯಾಗುವುದಕ್ಕಿಂತಲೂ, ತಮ್ಮ ಮಾಸಿಕ ಇಎಂಐನಲ್ಲಿ ಸ್ಥಿರತೆ ಇರುತ್ತದೆ ಎಂಬ ನಿಶ್ಚಿಂತೆ ಮುಖ್ಯವಾಗಿರುತ್ತದೆ. ಈ ವಿಶ್ವಾಸವೇ ಗ್ರಾಹಕರನ್ನು ಮನೆ ಖರೀದಿಸುವ ನಿರ್ಧಾರಕ್ಕೆ ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ.



















