ಲಾಸ್ ಏಂಜಲೀಸ್: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂಬರುವ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಜಾಗತಿಕ ಪ್ರೀಮಿಯರ್ ಪ್ರದರ್ಶನದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್ನಲ್ಲಿರುವ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್ನ ‘ಡೇವಿಡ್ ಗೆಫೆನ್ ಥಿಯೇಟರ್’ನಲ್ಲಿ ನಡೆದ ಈ ರೆಡ್ ಕಾರ್ಪೆಟ್ ಸಮಾರಂಭದಲ್ಲಿ ಯಶ್ ತಮ್ಮ ಗಾಂಭೀರ್ಯ ಹಾಗೂ ವಿಶಿಷ್ಟ ಶೈಲಿಯಿಂದ ಜಾಗತಿಕ ಮಾಧ್ಯಮಗಳ ಗಮನ ಸೆಳೆದಿದ್ದಾರೆ.
ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್, ರೆಡ್ ಕಾರ್ಪೆಟ್ಗಾಗಿ ಕಪ್ಪು ಬಣ್ಣದ ಸೂಟ್ ಧರಿಸಿದ್ದರು. ಆದರೆ ಅವರ ರಾಯಲ್ ಲುಕ್ಗೆ ಆಕರ್ಷಣೆ ತಂದಿದ್ದು ಅವರ ಕೋಟ್ ಮೇಲಿದ್ದ 10 ತಲೆಗಳ ರಾವಣನ ವಿನ್ಯಾಸವುಳ್ಳ ವಿಶೇಷ ಚಿನ್ನದ ಬ್ರೂಚ್ (Brooch). ರಾವಣನ ಮಹಾ ಪಂಡಿತ್ಯ, ನಾಲ್ಕು ವೇದ ಹಾಗೂ ಆರು ವೇದಾಂಗಗಳ ಜ್ಞಾನವನ್ನು ಸಂಕೇತಿಸುವ ಈ ‘ದಶಮುಖ’ ಆಭರಣವನ್ನು ಚಿನ್ನದ ಸರಪಳಿಗಳಿಂದ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿತ್ತು. ಯಶ್ ತಮ್ಮ ಶೈಲಿಯ ಮೂಲಕ ರಾವಣ ಕೇವಲ ಖಳನಾಯಕನಲ್ಲ, ಬದಲಿಗೆ ಅಗಾಧ ಜ್ಞಾನ ಹೊಂದಿದ್ದ ಶ್ರೇಷ್ಠ ಪಂಡಿತ ಎಂಬುದನ್ನು ಸಂಕೇತಿಸಿದರು. ಕಪ್ಪು ಕೂಲಿಂಗ್ ಗ್ಲಾಸ್, ಕಿವಿಯೋಲೆ ಹಾಗೂ ತಮ್ಮ ಟ್ರೇಡ್ಮಾರ್ಕ್ ಗಡ್ಡದೊಂದಿಗೆ ಯಶ್ ರೆಡ್ ಕಾರ್ಪೆಟ್ನಲ್ಲಿ ಮಿಂಚಿದರು.
ಪತ್ನಿ ರಾಧಿಕಾ ಪಂಡಿತ್, ಚಿತ್ರತಂಡ ಸಾಥ್
ಈ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಯಶ್ ಅವರಿಗೆ ಪತ್ನಿ ರಾಧಿಕಾ ಪಂಡಿತ್ ಸಾಥ್ ನೀಡಿದರು. ಜೊತೆಗೆ ಶ್ರೀರಾಮನ ಪಾತ್ರಧಾರಿ ರಣ್ಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಉಪಸ್ಥಿತರಿದ್ದು, ಜಾಗತಿಕ ಮಾಧ್ಯಮಗಳಿಗೆ ಹಾಗೂ ಅಭಿಮಾನಿಗಳಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡಿದರು.
ನವೆಂಬರ್ 5ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿದೆ ‘ರಾಮಾಯಣ’
ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್ಇಜಿ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಎರಡು ಭಾಗಗಳ ಪೌರಾಣಿಕ ಸಿನಿಮಾದಲ್ಲಿ ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸಿದ್ದಾರೆ. ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಮೊದಲ ಭಾಗವು 2026ರ ನವೆಂಬರ್ 5 ರಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆ ಕಾಣಲಿದೆ.


















