ಮೈಸೂರು : ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿದ್ದು, 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಮೈಸೂರಿನ ದೇವರಾಜ ಮೊಹಲ್ಲಾದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಈ ಸ್ಮಾರಕದಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಐತಿಹಾಸಿಕ ಹಿನ್ನೆಲೆಯಿದ್ದು, ಅದನ್ನು ಸಾಂಸ್ಕೃತಿಕ ಮತ್ತು ಯುವಜನ ಚಟುವಟಿಕೆಗಳ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ ಬಳಿಕ ಮೊದಲು ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ನಗರದಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಆಶ್ರಮದ ಆಡಿಟೋರಿಯಂನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 30 ನಿಮಿಷಗಳ ಕಾಲ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸುಮಾರು 6,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ವಿಶೇಷ ಪಾಸ್ ಕೂಡ ಇರಲಿದೆ. ಪಾಸ್ ಇದ್ದವರಿಗಷ್ಟೇ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶ ನೀಡಲಾಗುತ್ತದೆ.
ಇನ್ನೂ ಕಾರ್ಯಕ್ರಮದ ವೇಳೆ ಅಯೋಧ್ಯೆ ಶ್ರೀರಾಮನ ಮೂರ್ತಿ ನಿರ್ಮಿಸಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನ ಪ್ರಧಾನಿಗೆ ಸ್ಮರಣಿಕೆಯಾಗಿ ನೀಡಲಾಗುತ್ತದೆ. ಜೊತೆಗೆ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನ ಪ್ರತಿಬಿಂಬಿಸುವ ವಿಶೇಷ ಉಡುಗೊರೆಯನ್ನೂ ಪ್ರಧಾನಿಗೆ ಅರ್ಪಿಸಲಾಗುತ್ತದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೂ ಭೇಟಿ ನೀಡಿದ್ದ ಪ್ರಧಾನಿ
ಮೇ 10 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮೋತ್ಸವ ಹಾಗೂ ನೂತನ ಧ್ಯಾನ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ರಾಜ್ಯ ಸರ್ಕಾರಕ್ಕೆ ಸಂಕಷ್ಟ – ನೀಟ್ ರೀತಿ KPSC ಅಕ್ರಮದ ವಿರುದ್ಧ ಹೋರಾಟಕ್ಕೆ ಸಜ್ಜಾದ Gen-Zಗಳು!



















