ದಕ್ಷಿಣಕನ್ನಡ:ಜಿಲ್ಲೆಯ ಕಡಬ ತಾಲೂಕಿನ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾರಿಯಾಗಿದ್ದ ವಿವಾದಿತ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ವ್ಯವಸ್ಥಾಪನಾ ಸಮಿತಿ ಹಿಂಪಡೆದಿದೆ. ದೇವಸ್ಥಾನಕ್ಕೆ ರಜಾ ದಿನಗಳು ಹಾಗೂ ಆಶ್ಲೇಷ ನಕ್ಷತ್ರದ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದಿನವೊಂದಕ್ಕೆ 2,000 ದಿಂದ 3,000 ದವರೆಗೆ ಆಶ್ಲೇಷ ಬಲಿ ಪೂಜೆ ಸೇರಿದಂತೆ ವಿವಿಧ ಸೇವೆಗಳ ಸಂಕಲ್ಪಕ್ಕಾಗಿ ಭಕ್ತರು ಗಂಟೆಗಟ್ಟಲೆ ಕಾಯುತ್ತಿದ್ದ ಹಿನ್ನೆಲೆಯಲ್ಲಿ ಈ ಸಾಮೂಹಿಕ ಸಂಕಲ್ಪ ಪ್ರಾರಂಭಿಸಲಾಗಿತ್ತು.
ಸಾಮೂಹಿಕ ಸಂಕಲ್ಪ ವ್ಯವಸ್ಥೆಗೆ ಶೇಕಡಾ 99 ಭಕ್ತರು ಒಪ್ಪಿಗೆಯಿದ್ದರೂ, ಅಷ್ಟಮಂಗಲ ಪ್ರಶ್ನೆಯಲ್ಲಿ ಚಿಂತನೆ ನಡೆಸಿದ ಬಳಿಕ ಮತ್ತು ಶ್ರದ್ಧಾಭಕ್ತಿಯಿಂದ ಬರುವ ಒಬ್ಬ ಭಕ್ತನ ಮನಸ್ಸಿಗೂ ನೋವಾಗಬಾರದು ಎಂಬ ಕಾರಣಕ್ಕೆ ಇಂದಿನಿಂದ ಮೊದಲಿನ ರೀತಿಯಲ್ಲಿಯೇ ಸಂಕಲ್ಪಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ ನೀಡಿದ್ದಾರೆ.


















