ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲವೂ ಖುಲ್ಲಂ ಖುಲ್ಲ ಎನ್ನುವಂತಾಗಿದೆ. ಈ ಹಿಂದೆ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಇದ್ದ ವೇಳೆ ಸಿಕ್ಕ ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಟುವಾಗಿ ಟೀಕಿಸಿದ್ದ ಬೆನ್ನಲ್ಲೇ ಇದೀಗ ರೌಡಿಶೀಟರ್ ಗುಬ್ಬಚ್ಚಿ ಸೀನಾ ಬರ್ತ್ಡೇ ಆಚರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿಗಳಿಗೆ ಭಾರೀ ಸಂಕಷ್ಟ ಎದುರಾಗಿದೆ.
ಪರಪ್ಪನ ಅಗ್ರಹಾರ ಟವರ್ ಒಂದು 6ನೇ ಬ್ಯಾರಕ್ 7ನೇ ಕೊಠಡಿಯಲ್ಲಿ ನಡೆದಿದ್ದ ಬರ್ತ್ಡೇ ಆಚರಣೆ ಪ್ರಕರಣವನ್ನು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಜೈಲಾಧಿಕಾರಿಗಳು, ಸಿಬ್ಬಂದಿಗಳ ಮೇಲೆ ಅಮಾನತ್ತಿನ ತೂಗುಗತ್ತಿ ನೇತಾಡುತ್ತಿದೆ. ಈ ಹಿಂದೆ ದರ್ಶನ್ ರಾಜಾತಿಥ್ಯ ಪ್ರಕರಣದಲ್ಲಿ ಅಧಿಕಾರಿಗಳು, ಸಿಬ್ಬಂಗಳ ತಲೆದಂಡವಾಗಿತ್ತು. ಇದೀಗ ಮತ್ತೆ ವಿಚಾರಣಾಧೀನ ಕೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ಹಿನ್ನೆಲೆ ಹಲವಾರು ಅಧಿಕಾರಿಗಳು ಸಸ್ಪೆಂಡ್ ಆಗುವ ಸಾಧ್ಯತೆಯಿದೆ.
ಈ ಪ್ರಕರಣವನ್ನು ಈಗಾಗಲೇ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ADGP ದಯಾನಂದ್ ಅವರು ಗಂಭೀರವಾಗಿ ಪರಿಗಣಿಸಿ ಜೈಲಾಧಿಕಾರಿ ಹಾಗೂ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಂತರಿಕ ತನಿಖೆಗೆ ಆದೇಶಿಸಿರುವ ಅವರು, ತನಿಖೆ ನಡೆಸಿ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೈದಿಗಳ ರಾಜಾತಿಥ್ಯಕ್ಕೆ ಜೈಲಾಧಿಕಾರಿಗಳ ಲೋಪವೇ ಕಾರಣವಾಗಿದ್ದು, ಜೈಲಿನ ಬೇಕರಿಯಿಂದ ಕೇಕ್ ತರಿಸಿಕೊಂಡಿದ್ದ ಗುಬ್ಬಚ್ಚಿ ಸೀನಾನ ಸಹಚರರೊಂದಿಗೆ ಜೈಲಾಧಿಕಾರಿಗಳು, ಸಿಬ್ಬಂದಿಗಳು ಕೈಜೋಡಿಸಿರುವ ಆರೋಪ ಕೇಳಿಬಂದಿದೆ. ಕೆಲ ಅಧಿಕಾರಿಗಳು, ಸಿಬ್ಬಂದಿಗಳು ಹಣ ಪಡೆದು ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಆರೋಪವೂ ಕೆಳಿಬಂದಿದೆ.
ಸದ್ಯ ಜೈಲಿನ ಮುಖ್ಯ ಅಧೀಕ್ಷಕ ಕೆ.ಸುರೇಶ್, ಅಧೀಕ್ಷಕ ಐ.ಜೆ.ಮ್ಯಾಗೇರಿ, ದಕ್ಷಿಣ ವಲಯ ಡಿಐಜಿ ಕೆ.ಸಿ ದಿವ್ಯಶ್ರೀ, ಸಹಾಯಕ ಅಧಿಕ್ಷಕ ಅಶೋಕ್ ಭಜಂತ್ರಿ, ಕರ್ಣ ಮತ್ತು ಜೈಲರ್ ಕಾಂತಪ್ಪ ಪೂಜಾರಿ ಸೇರಿದಂತೆ ಹಲವು ಅಧಿಕಾರಿ ಸಿಬ್ಬಂದಿಗಳ ಮೇಲೆ ಅಮಾನತ್ತಿನ ತೂಗುಗತ್ತಿ ನೇತಾಡುತ್ತಿದ್ದು, ಯಾವುದೇ ಕ್ಷಣ ಕೈದಿಗಳಿಗೆ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿಈ 11 ಮಂದಿ ತಲೆದಂಡವಾಗುವ ಸಾಧ್ಯತೆಯಿದೆ.



















