ನವದೆಹಲಿ: ಭಾರತದ ವಿರುದ್ಧ ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಅದರಲ್ಲೂ, ಪಂಜಾಬ್ ಗಡಿಗಳಲ್ಲಿ ಭಾರತೀಯ ವಾಯುಪಡೆಯ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನದ ಕ್ಷಿಪಣಿಗಳು ಹಾಗೂ ಡ್ರೋನ್ ಗಳ ಮೂಲಕ ದಾಳಿ ಮಾಡಲು ಯತ್ನಿಸಲಾಗಿದೆ. ಆದರೆ, ಸೇನೆಯು ಪಾಕಿಸ್ತಾನದ ಡ್ರೋನ್ ಗಳನ್ನು ಹೊಡೆದುರುಳಿಸಿದೆ. ಈ ಫೋಟೋಗಳನ್ನು ಸೇನೆಯೇ ಬಿಡುಗಡೆ ಮಾಡಿದೆ.
ಭಾರತೀಯ ಸೇನೆಯ ಅಡಿಷನಲ್ ಡೆರೆಕ್ಟೋರೇಟ್ ಜನರಲ್ ಆಫ್ ಪಬ್ಲಿಕ್ ಇನ್ಫಾರ್ಮೇಷನ್ (ಎಡಿಜಿಪಿಐ) ಫೋಟೋಗಳನ್ನು ರಿಲೀಸ್ ಮಾಡಿದೆ. “ಶನಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪಾಕಿಸ್ತಾನವು ಪಂಜಾಬ್ ಗಡಿಯಲ್ಲಿ ಡ್ರೋನ್ ಗಳ ಮೂಲಕ ದಾಳಿಗೆ ಯತ್ನಿಸಿದೆ. ಆದರೆ, ಪಾಕಿಸ್ತಾನದ ಡ್ರೋನ್ ಗಳನ್ನು ಭಾರತೀಯ ಏರ್ ಡಿಫೆನ್ಸ್ ವ್ಯವಸ್ಥೆಯು ಹೊಡೆದುರುಳಿಸಿದೆ. ಅಮೃತಸರದ ಗಡಿಯಲ್ಲಿ ಪಾಕ್ ಡ್ರೋನ್ ಗಳ ಅವಶೇಷಗಳು ಪತ್ತೆಯಾಗಿವೆ” ಎಂದು ಸೇನೆ ಮಾಹಿತಿ ನೀಡಿದೆ.
“ಭಾರತದ ನಾಗರಿಕರು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ದಾಳಿ ಮಾಡುತ್ತಿರುವುದು ಅಕ್ಷಮ್ಯವಾಗಿದೆ. ಗಡಿಯಲ್ಲಿ ಪರಿಸ್ಥಿತಿಯನ್ನು ಬಿಗಡಾಯಿಸುವ ದೃಷ್ಟಿಯಿಂದ ಪಾಕಿಸ್ತಾನ ದಾಳಿ ನಡೆಸುತ್ತಿದೆ. ಇದಕ್ಕೆ ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಲು ಸಕಲ ರೀತಿಯಲ್ಲಿ ಸಜ್ಜಾಗಿ ನಿಂತಿದೆ” ಎಂದು ಎಕ್ಸ್ ಖಾತೆಯಲ್ಲಿ ತಿಳಿಸಲಾಗಿದೆ.
ಮತ್ತೊಂದಡೆ, ಪಾಕಿಸ್ತಾನದ ಕುಕೃತ್ಯದ ಕುರಿತು ಭಾರತ ಸರ್ಕಾರವೂ ಮಾಹಿತಿ ನೀಡಿದೆ. ಗಡಿಯಲ್ಲಿರುವ ಫಾರ್ವರ್ಡ್ ಏರಿಯಾಗಳಿಗೆ ಪಾಕಿಸ್ತಾನವು ಸೇನೆಯನ್ನು ನುಗ್ಗಿಸುತ್ತಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸೇನೆ ಸಜ್ಜಾಗಿ ನಿಂತಿದೆ. ಇದುವರೆಗೆ ಪಾಕ್ ಮಾಡಿದ ದಾಳಿಯ ಯತ್ನಗಳನ್ನು ಸಮರ್ಥವಾಗಿ ವಿಫಲಗೊಳಿಸಲಾಗಿದೆ. ಭಾರತದ ಎಲ್ಲ ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ಸರ್ಕಾರ ತಿಳಿಸಿದೆ.



















