ಬೆಂಗಳೂರು : ನಗರದ ಪ್ರಮುಖ ರಸ್ತೆಗಳಲ್ಲಿ ಕಳೆದ ಆರು ದಿನಗಳಿಂದ ಪಾದಚಾರಿ ಮಾರ್ಗಗಳ (ಫುಟ್‌ಪಾತ್) ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ ಈ ಕ್ರಮಕ್ಕೆ ಆಡಳಿತಾರೂಢ ಪಕ್ಷದೊಳಗೇ ವಿರೋಧ ವ್ಯಕ್ತವಾಗುತ್ತಿರುವ ಮಾತುಗಳು ಕೇಳಿಬರುತ್ತಿವೆ.
ಮುಂದಿನ ದಿನಗಳಲ್ಲಿ ಜಿಬಿಎ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಕಾರ್ಯ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸ್ವಪಕ್ಷದ ಕೆಲ ಶಾಸಕರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದು, “ಒತ್ತುವರಿ ತೆರವು ವಿಚಾರದಲ್ಲಿ ಸ್ವಪಕ್ಷದಿಂದಲೂ ಒತ್ತಡ ಇದೆ. ಆದರೂ ಎಲ್ಲ ಒತ್ತಡಗಳನ್ನು ಮೀರಿ ಕಾನೂನು ಪ್ರಕಾರ ಕಾರ್ಯಾಚರಣೆ ಮುಂದುವರಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಒತ್ತುವರಿ ತೆರವು ನಡೆಯುತ್ತಿದೆ. ಯಾವುದೇ ರೀತಿಯ ಒತ್ತಡ ಬಂದರೂ ಕಾನೂನಿನ ಚೌಕಟ್ಟಿನಲ್ಲೇ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುಮಾರು 14 ಸಾವಿರ ಕಿ.ಮೀ. ರಸ್ತೆ ಜಾಲವಿದ್ದು, ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಒತ್ತುವರಿಯಿಂದ ತೊಂದರೆಯಾಗುತ್ತಿದೆ. ಹೀಗಾಗಿ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಫುಟ್‌ಪಾತ್ ತೆರವುಗೊಳಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಕಳೆದ ಐದು ದಿನಗಳಲ್ಲಿ ಸುಮಾರು 150 ಕಿ.ಮೀ. ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಮುಂದಿನ ದಿನಗಳಲ್ಲೂ ಪ್ರಮುಖ ರಸ್ತೆಗಳಲ್ಲಿ ಇದೇ ಕಾರ್ಯಾಚರಣೆ ಮುಂದುವರಿಸಿ, ಪಾದಚಾರಿಗಳಿಗೆ ಸುಗಮ ಸಂಚಾರ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಆರಂಭದ ದಿನಗಳಿಗಿಂತ ಆರನೇ ದಿನಕ್ಕೆ ಒತ್ತುವರಿ ತೆರವು ಕಾರ್ಯದ ವೇಗ ಸ್ವಲ್ಪ ಕುಂಠಿತಗೊಂಡಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಇದನ್ನೂ ಓದಿ : ಮಂಗಳೂರಲ್ಲಿ ಚಿನ್ನದ ವ್ಯಾಪಾರಿ ದರೋಡೆ ಕೇಸ್ : 13 ಆರೋಪಿಗಳ ಫೋಟೋ ರಿಲೀಸ್.. ಸುಳಿವು ಕೊಟ್ರೆ ಬಹುಮಾನ!



















