ಉಡುಪಿ : ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ವಿಚಾರ ರಾಜಕೀಯ ಕಾವು ಪಡೆದುಕೊಂಡಿದೆ. ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಚೇರಿ ನಿರ್ಮಿಸಲು ಮುಂದಾಗಿದೆ ಎಂದು ಆರೋಪಿಸಿ ಕುಂದಾಪುರ ಬಿಜೆಪಿ ಮಂಡಲದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಇಂದು ಕುಂದಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಶಂಕುಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಪ್ರತಿಭಟನೆ ನಡೆಸಿ ಕಾರ್ಯಕ್ರಮ ಕೈಬಿಡುವಂತೆ ಆಗ್ರಹಿಸಿದ್ದಾರೆ.

ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಭಾಗವಹಿಸಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರಿ ಸ್ವತ್ತಿನಲ್ಲಿ ಪಕ್ಷದ ಕಟ್ಟಡ ನಿರ್ಮಿಸುವುದು ಸರಿಯಲ್ಲ, ಸರ್ಕಾರದ ಈ ನಡೆ ಸಾರ್ವಜನಿಕ ಆಸ್ತಿಯ ದುರ್ಬಳಕೆ ಎಂದು ಅವರು ಆರೋಪಿಸಿದ್ದಾರೆ.
ಕುಂದಾಪುರದ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿರುವ ಗೂಡ್ಸ್ ನಿಲ್ದಾಣದ ಸರ್ಕಾರಿ ಜಾಗವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಹೀಗಾಗಿ ಈ ಜಾಗ ಸರ್ಕಾರದ ಆಸ್ತಿ ಆಗಿದ್ದು, ಯಾವುದೇ ರಾಜಕೀಯ ಪಕ್ಷದ ಖಾಸಗಿ ಆಸ್ತಿಯಲ್ಲ, ಕಾಂಗ್ರೆಸ್ ಪಕ್ಷ ತಕ್ಷಣ ಈ ನಿರ್ಮಾಣ ಕಾರ್ಯವನ್ನು ಕೈಬಿಡಬೇಕು, ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ, ಕಾಂಗ್ರೆಸ್ ಭವನ ನಿರ್ಮಾಣವನ್ನು ನಿಲ್ಲಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ ; ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!


















