ಸೂರತ್: ಗುಜರಾತ್‌ನ ಸೂರತ್ ನಗರದಲ್ಲಿ ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ರಾಜಕಾರಣಿಗಳ ನಿರಂತರ ಕಿರುಕುಳಕ್ಕೆ ಬೇಸತ್ತ 73 ವರ್ಷದ ವೃದ್ಧ ಹಾಗೂ ಅವರ 68 ವರ್ಷದ ಪತ್ನಿ ದಯಾಮರಣಕ್ಕೆ (Euthanasia) ಅನುಮತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸೂರತ್ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ತಮಗೆ ವರ್ಷಗಳಿಂದ ದೈಹಿಕ, ಮಾನಸಿಕ ಮತ್ತು ಆರ್ಥಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶ್ಯಾಮ್‌ಭಾಯ್ ಕಪೂರ್‌ಜೀ ಗೆಹ್ಲೋಟ್ ಮತ್ತು ಅವರ ಪತ್ನಿ ಮಧುಬೆನ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಜೀವನೋಪಾಯವಾಗಿದ್ದ ಮಳಿಗೆಗಳನ್ನು ಅಧಿಕಾರಿಗಳು ಪದೇ ಪದೇ ಸೀಲ್ ಮಾಡುತ್ತಿರುವುದರಿಂದ ತಾವು ಆರ್ಥಿಕವಾಗಿ ಹೈರಾಣಾಗಿದ್ದು, ಬದುಕುವ ಆಸೆಯನ್ನೇ ಕಳೆದುಕೊಂಡಿರುವುದಾಗಿ ದಂಪತಿ ಅಳಲು ತೋಡಿಕೊಂಡಿದ್ದಾರೆ.
ಕುಟುಂಬದ 9 ಸದಸ್ಯರನ್ನು ಬಲಿಪಡೆದಿದ್ದ ರಸ್ತೆ ಅಪಘಾತ
ಈ ವೃದ್ಧ ದಂಪತಿಯ ಜೀವನವು ಮೊದಲೇ ಭೀಕರ ದುರಂತದಿಂದ ಜರ್ಜರಿತವಾಗಿತ್ತು. 2016ರ ನವೆಂಬರ್ 7 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಈ ದಂಪತಿಯ ಏಕೈಕ ಪುತ್ರ, ಸೊಸೆ, ಮೊಮ್ಮಕ್ಕಳು, ಪುತ್ರಿ, ಅಳಿಯ ಹಾಗೂ ಮತ್ತೊಬ್ಬ ಸಂಬಂಧಿ ಸೇರಿದಂತೆ ಕುಟುಂಬದ ಒಟ್ಟು 9 ಸದಸ್ಯರು ದುರ್ಮರಣಕ್ಕೀಡಾಗಿದ್ದರು. ಈ ಮಹಾ ದುರಂತದ ನಂತರ ಒಂಟಿಯಾಗಿದ್ದ ವೃದ್ಧ ದಂಪತಿ, ಒಬ್ಬರಿಗೊಬ್ಬರು ಆಸರೆಯಾಗಿ ಜೀವನ ಸಾಗಿಸುತ್ತಿದ್ದರು. ಇಂತಹ ನೋವಿನ ನಡುವೆಯೂ ಬದುಕಲು ಹೋರಾಡುತ್ತಿದ್ದ ದಂಪತಿಗೆ ಸದ್ಯ ಸ್ಥಳೀಯ ಆಡಳಿತದ ನಡೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಐದು ವರ್ಷಗಳ ಕಾನೂನು ಹೋರಾಟ
ಗೆಹ್ಲೋಟ್ ದಂಪತಿ ಕಳೆದ 2006ರಲ್ಲಿ 11 ಸಣ್ಣ ಮಳಿಗೆಗಳನ್ನು ಖರೀದಿಸಿದ್ದರು. 2008ರಲ್ಲಿ ಈ ಪ್ರದೇಶವು ಸೂರತ್ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬಂದಾಗಿನಿಂದಲೂ ಅವರು ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದರು. ಆದರೆ, 2021ರಲ್ಲಿ ಅಂದಿನ ಎಸ್‌ಎಂಸಿ ಕಾರ್ಯನಿರ್ವಾಹಕ ಎಂಜಿನಿಯರ್ ಯಾವುದೇ ಮುನ್ಸೂಚನೆ ನೀಡದೆ ಇವರ ಮಳಿಗೆಗಳಿಗೆ ಬೀಗಮುದ್ರೆ ಹಾಕಿದ್ದರು. ಇದನ್ನು ಪ್ರಶ್ನಿಸಿ ದಂಪತಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿ ಸುಮಾರು ಐದು ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ದೊಡ್ಡ ಸಂಸ್ಥೆಗಳಿಗೆ ಅನ್ವಯವಾಗುವ ಅಗ್ನಿಶಾಮಕ ಸುರಕ್ಷತಾ ಕ್ರಮಗಳು ಈ ಸಣ್ಣ ಅಂಗಡಿಗಳಿಗೆ ಅಗತ್ಯವಿಲ್ಲ ಎಂದು ಅಗ್ನಿಶಾಮಕ ಇಲಾಖೆ ವರದಿ ನೀಡಿದ ಬಳಿಕ, ಈ ವರ್ಷದ ಜನವರಿ 31 ರಂದು ನ್ಯಾಯಾಲಯದ ಆದೇಶದಂತೆ ಅಂಗಡಿಗಳನ್ನು ಮತ್ತೆ ತೆರೆಯಲಾಗಿತ್ತು.
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಮತ್ತೆ ಸೀಲ್
ಹೈಕೋರ್ಟ್‌ನಲ್ಲಿ ದಂಪತಿ ಜಯ ಸಾಧಿಸಿದ ಬೆನ್ನಲ್ಲೇ, ಕಳೆದ ಮೇ 30ರಂದು ಪ್ರಸ್ತುತ ಇರುವ ಕಾರ್ಯನಿರ್ವಾಹಕ ಎಂಜಿನಿಯರ್ ಆದೇಶದ ಮೇರೆಗೆ ಆ ಅಂಗಡಿಗಳನ್ನು ಮತ್ತೊಮ್ಮೆ ಸೀಲ್ ಮಾಡಲಾಗಿದೆ. ಈ ಬಾರಿಯೂ ಯಾವುದೇ ಲಿಖಿತ ನೋಟಿಸ್ ಅಥವಾ ಸೂಕ್ತ ಕಾರಣವನ್ನು ನೀಡಿಲ್ಲ ಎಂದು ದಂಪತಿ ದೂರಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರೊಬ್ಬರನ್ನು ಭೇಟಿಯಾಗುವಂತೆ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಮತ್ತು ತಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸಲಾಗಿದೆ ಎಂದು ಶ್ಯಾಮ್‌ಭಾಯ್ ಗೆಹ್ಲೋಟ್ ಗಂಭೀರವಾಗಿ ಆರೋಪಿಸಿದ್ದಾರೆ. ಪದೇ ಪದೇ ಲಿಖಿತ ವಿವರಣೆ ಕೇಳಿದರೂ ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ ಎನ್ನಲಾಗಿದೆ.
ಸಾವೊಂದೇ ಕೊನೆಯ ಆಯ್ಕೆ ಎಂದ ದಂಪತಿ
ಅಧಿಕಾರಿಗಳು, ರಾಜಕಾರಣಿಗಳ ಕಿರುಕುಳ ತಡೆದುಕೊಳ್ಳಲು ಸಾಧ್ಯವಾಗದೆ ವೃದ್ಧ ದಂಪತಿ ಕೊನೆಯದಾಗಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. “ನಮಗೆ ಇನ್ನು ಬದುಕುವ ಯಾವುದೇ ಆಸೆ ಉಳಿದಿಲ್ಲ. ವ್ಯವಸ್ಥೆಯಿಂದ ನಮಗೆ ನ್ಯಾಯ ಸಿಗದೇ ಇದ್ದರೆ, ಸಾವು ಮಾತ್ರವೇ ನಮಗಿರುವ ಕೊನೆಯ ಆಯ್ಕೆ” ಎಂದು ಶ್ಯಾಮ್‌ಭಾಯ್ ಗೆಹ್ಲೋಟ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.



















