ಕೊಪ್ಪಳ: ಅಂಜನಾದ್ರಿಯಲ್ಲಿ ಅರ್ಚಕರೊಬ್ಬರಿಗೆ ಅಧಿಕಾರಿಗಳು ಕಿರುಕುಳ ನೀಡಿರುವ ಆರೋಪವೊಂದು ಕೇಳಿ ಬಂದಿದೆ.
ಅಧಿಕಾರಿಗಳಿಂದ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿ ತಹಸೀಲ್ದಾರ್ ಕಚೇರಿ ಮುಂದೆ ಹಿಂದೂಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ. ಅಂಜನಾದ್ರಿ ದೇವಸ್ಥಾನದಲ್ಲಿ ಅರ್ಚಕ ವಿದ್ಯಾದಾಸ ಬಾಬಾಗೆ ಪೂಜೆ ಸಲ್ಲಿಸಲು ಸುಪ್ರೀಂಕೋರ್ಟ್‌ನಿಂದ ಆದೇಶ ನೀಡಲಾಗಿದೆ. ಆದ್ದರಿಂದ ಅರ್ಚಕರು ಆದೇಶದ ಪ್ರಕಾರ ಪೂಜೆ ಸಲ್ಲಿಸಲು ಬಂದಿದ್ದಾರೆ. ಆ ವೇಳೆ ಕೆಲವು ಅಧಿಕಾರಿಗಳು ಅರ್ಚರಿಕರಿಗೆ ಕಿರುಕುಳ ನೀಡಿದ್ದಾರೆಂದು ಪ್ರತಿಭಟಿಸಲಾಯಿತು.
ಅಧಿಕಾರಿಗಳ ನಡೆ ಖಂಡಿಸಿ ವಿವಿಧ ಸಂಘಟನೆಗಳಿಂದ ಹೋರಾಟ ನಡೆಸಿ ಆಕ್ರೋಶ ಹೊರ ಹಾಕಲಾಯಿತು. ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆ, ರೈತ ಸಂಘಟನೆ, ದಲಿತಪರ ಸಂಘಟನೆಗಳು ಭಾಗಿಯಾಗಿದ್ದವು.
ಏನಿದು ಹಿನ್ನೆಲೆ..?
ವಿಶ್ವವಿಖ್ಯಾತ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಪೂಜೆಗಾಗಿ ಈ ಹಿಂದೆ ಹೈಡ್ರಾಮಾ ನಡೆದಿತ್ತು. ಅಂಜನಾದ್ರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವಿದ್ಯಾದಾಸ್ ಬಾಬಾ ಎಂಬುವವರನ್ನು ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೂಜೆ ಮಾಡುವುದರಿಂದ ಬಿಡಿಸಲಾಗಿತ್ತು. ನಂತರ ವಿದ್ಯಾದಾಸ್ ಬಾಬಾ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಬೆಟ್ಟದ ಮೇಲೆ ಮಾತ್ರ ಪೂಜೆ ಹಾಗೂ ವಾಸವಾಗಿರಲು ಅವಕಾಶ ನೀಡಿತ್ತು.



















