ಮುಂಬೈ: ಇಡೀ ಭಾರತೀಯರು ಅತ್ಯಂತ ಸಂತಸ ಪಡುವಂತಹ ಸುದ್ದಿಯೊಂದು ಇದೀಗ ಅಮೆರಿಕದಿಂದ ಹೊರಬಿದ್ದಿದೆ. ಅದರಲ್ಲಿಯೂ ನಮ್ಮ ಆಭರಣ ಪ್ರಿಯ ಮಹಿಳಾ ಮಣಿಗಳು ಹಬ್ಬವನ್ನೇ ಆಚರಿಸುವಂತಿದೆ ಅಮೆರಿಕದ ಮಾರ್ನಿಂಗ್ ಸ್ಟಾರ್ ನ ವಿಶ್ಲೇಷಕ ಜಾನ್ ಮಿಲ್ಸ್ ಅವರು ನುಡಿದಿರುವ ಭವಿಷ್ಯವಾಣಿ.
ಈಗಾಗಲೇ 1 ಲಕ್ಷದ ಸನಿಹಕ್ಕೆ ತಲುಪಿರುವ ಚಿನ್ನದ ಬೆಲೆ ಮುಂಬರುವ ದಿನಗಳಲ್ಲಿ ಅರ್ಧದಷ್ಟು ತಗ್ಗುವ ಸಾಧ್ಯತೆಗಳಿವೆ ಎಂಬ ಭವಿಷ್ಯವಾಣಿ ಹೊರ ಬಿದ್ದಿದೆ. ಅಚ್ಚರಿಯಾದರೂ ಇದು ಸತ್ಯ. ಮುಂಬರುವ ಕೆಲ ವರ್ಷಗಳಲ್ಲಿ ಬಂಗಾರದ ಬೆಲೆ ಶೇ. 38ರಷ್ಟು ಕುಸಿಯಲಿದೆ ಎನ್ನಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 3,100 ಡಾಲರ್ ಗಳಿಗಿಂತ ಹೆಚ್ಚಾಗಿದೆ. ಈ ಬೆಲೆಯಲ್ಲಿ ಶೇ.38 ರಿಂದ ಶೇ.40ರಷ್ಟು ಇಳಿಕೆ ಕಂಡರೆ ಭಾರತದಲ್ಲಿ 10 ಗ್ರಾಂ ಬಂಗಾರವು 55 ಸಾವಿರ ರೂಪಾಯಿನಿಂದ 60 ಸಾವಿರ ರೂಪಾಯಿಗೆ ಇಳಿಯಬಹುದು. ಜಾನ್ ಮಿಲ್ಸ್ ಅವರು ಚಿನ್ನದ ಬೆಲೆ ಪ್ರಸ್ತುತ ಔನ್ಸ್‌ಗೆ 3,080 ಡಾಲರ್‌ನಿಂದ 1,820 ಡಾಲರ್‌ಗೆ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಚಿನ್ನದ ಬೆಲೆ ಕುಸಿತಕ್ಕೆ ಕಾರಣ ಏನು?
ಹಣದುಬ್ಬರ, ಭೌಗೋಳಿಕ, ಆರ್ಥಿಕ ಅನಿಶ್ಚಿತತೆ, ರಾಜಕೀಯ ಸಮಸ್ಯೆಗಳು ಚಿನ್ನದ ದರ ಕಡಿಮೆ ಆಗಲು ಕಾರಣ ಆಗಬಹುದು ಎನ್ನಲಾಗುತ್ತಿದೆ. ಜಾಗತಿಕವಾಗಿ ಚಿನ್ನದ ಉತ್ಪಾದನೆ ಹೆಚ್ಚಾಗಿದೆ. 2024ರಲ್ಲಿ ಚಿನ್ನದ ಗಣಿಗಾರಿಕೆ ಲಾಭವು ಔನ್ಸ್‌ಗೆ 950 ಡಾಲರ್ ಆಗಿದ್ದರೆ, ಜಾಗತಿಕವಾಗಿ 2 ಲಕ್ಷದ 16 ಸಾವಿರದ 265 ಟನ್ ಆಗಿದೆ. ಅದರಲ್ಲಿಯೂ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಚಿನ್ನದ ಉತ್ಪಾದನೆ ಹೆಚ್ಚಿಸಿದೆ. ಕಳೆದ ವರ್ಷ ವಿವಿಧ ದೇಶಗಳ ಕೇಂದ್ರ ಬ್ಯಾಂಕ್ ಗಳು 1,045 ಟನ್ ಚಿನ್ನ ಖರೀದಿಸಿವೆ.
ಆದರೆ, ಭವಿಷ್ಯದಲ್ಲಿ ಈ ಚಿನ್ನದ ಖರೀದಿ ಪ್ರಮಾಣ ಕಡಿಮೆ ಆಗಬಹುದು. ಇದರಿಂದ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಬಹುದು. ಇದಕ್ಕೆ ಸಾಕ್ಷಿ ಎನ್ನುವಂತೆ ಈ ಹಿಂದೆ ಜಾನ್ ನುಡಿದ ಭವಿಷ್ಯವಿಂದು ಸತ್ಯವಾಗಿದೆ. ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಷೇರು ಮಾರುಕಟ್ಟೆ ಕುಸಿತವಾಗಲಿದೆ ಎಂದಿದ್ದರು ಜಾನ್. ಹೀಗಾಗಿ ಅವರ ಚಿನ್ನದ ಭವಿಷ್ಯವಾಣಿಯೂ ನಿಜವಾಗಬಹುದಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.