ಲಂಡನ್ : ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆದ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸ್ಕೈವರ್ ಬ್ರಂಟ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಈ ರೋಚಕ ಫೈನಲ್ ಹಣಾಹಣಿಯಲ್ಲಿ ಅದ್ಭುತ ಅರ್ಧಶತಕ ಸಿಡಿಸಿದ ಅವರು, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾರೂ ಮಾಡದಂತಹ ಅಪರೂಪದ ಮೈಲಿಗಲ್ಲೊಂದನ್ನು ತಲುಪಿದ್ದಾರೆ.
ಅತಿ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆ
ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತ್ಯಮೂಲ್ಯ ಅರ್ಧಶತಕ ಸಿಡಿಸಿದ ನ್ಯಾಟ್ ಸ್ಕೈವರ್ ಬ್ರಂಟ್, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ 45 ಎಸೆತಗಳಲ್ಲಿ ಅವರು ತಮ್ಮ ಅರ್ಧಶತಕವನ್ನು ಪೂರೈಸಿದರು. ಈ ಮೂಲಕ ಅವರು ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಒಂಬತ್ತನೇ ಅರ್ಧಶತಕವನ್ನು ದಾಖಲಿಸಿದರು. ಈ ಸಾಧನೆ ಮಾಡಲು ಅವರು ಕೇವಲ 31 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿರುವುದು ವಿಶೇಷ. ಇದಕ್ಕೂ ಮುನ್ನ ನ್ಯೂಜಿಲೆಂಡ್‌ನ ಸುಜೀ ಬೇಟ್ಸ್ (44 ಇನ್ನಿಂಗ್ಸ್‌ಗಳಲ್ಲಿ ಎಂಟು 50+ ಸ್ಕೋರ್) ಹಾಗೂ ಆಸ್ಟ್ರೇಲಿಯಾದ ಬೆತ್ ಮೂನಿ (31 ಇನ್ನಿಂಗ್ಸ್‌ಗಳಲ್ಲಿ ಎಂಟು 50+ ಸ್ಕೋರ್) ಜಂಟಿಯಾಗಿ ಈ ದಾಖಲೆಯನ್ನು ಹೊಂದಿದ್ದರು. ಇದೀಗ ನ್ಯಾಟ್ ಸ್ಕೈವರ್ ಈ ಇಬ್ಬರು ದಿಗ್ಗಜರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ವಿಶೇಷ ಎಲೈಟ್ ಪಟ್ಟಿಗೆ ಸೇರಿದ ನ್ಯಾಟ್ ಸ್ಕೈವರ್
ಫೈನಲ್ ಪಂದ್ಯದಲ್ಲಿ 53 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿ ಅಜೇಯರಾಗುಳಿದ ನ್ಯಾಟ್ ಸ್ಕೈವರ್ ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ. ಟಿ20 ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಎರಡೂ ಪಂದ್ಯಗಳಲ್ಲಿ 50ಕ್ಕೂ ಅಧಿಕ ರನ್ ಸಿಡಿಸಿದ ವಿಶ್ವದ ಬೆರಳೆಣಿಕೆಯಷ್ಟು ಆಟಗಾರ್ತಿಯರ ಎಲೈಟ್ ಪಟ್ಟಿಗೆ ಅವರು ಸೇರ್ಪಡೆಗೊಂಡಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (2016), ಬೆತ್ ಮೂನಿ (2023) ಹಾಗೂ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ (2023) ಮಾತ್ರ ಇಂತಹ ಅಸಾಧಾರಣ ಸಾಧನೆ ಮಾಡಿದ್ದರು. ಇದೀಗ ಆ ಪಟ್ಟಿಗೆ ಇಂಗ್ಲೆಂಡ್ ನಾಯಕಿಯ ಹೆಸರು ಕೂಡ ಸೇರ್ಪಡೆಯಾಗಿದೆ.
ಆರಂಭಿಕ ಆಘಾತದ ನಡುವೆ ನಾಯಕಿಯ ಆಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಎರಡನೇ ಓವರ್‌ನಲ್ಲೇ ಆಮಿ ಜೋನ್ಸ್ ವಿಕೆಟ್ ಕಳೆದುಕೊಂಡರೆ, ಆ ಬಳಿಕ ಡ್ಯಾನಿ ವ್ಯಾಟ್-ಹಾಡ್ಜ್ ಕೇವಲ 8 ರನ್‌ಗಳಿಗೆ ಪೆವಿಲಿಯನ್ ಸೇರಿದರು. (ಇದೇ ಟೂರ್ನಿಯಲ್ಲಿ 300 ರನ್ ಕಲೆಹಾಕುವ ಮೂಲಕ ಡ್ಯಾನಿ ವ್ಯಾಟ್ ಕೂಡ ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ). ಸಂಕಷ್ಟದ ಸಮಯದಲ್ಲಿ ಜೊತೆಯಾದ ಆಲಿಸ್ ಕ್ಯಾಪ್ಸೆ (20 ಎಸೆತಗಳಲ್ಲಿ 23 ರನ್) ಹಾಗೂ ನ್ಯಾಟ್ ಸ್ಕೈವರ್ ಬ್ರಂಟ್ 35 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.
ಫ್ರೆಯಾ ಕೆಂಪ್ ಜೊತೆ ಅದ್ಭುತ ಜೊತೆಯಾಟ
ಆಲಿಸ್ ಕ್ಯಾಪ್ಸೆ ನಿರ್ಗಮನದ ಬಳಿಕ ನಾಯಕಿ ನ್ಯಾಟ್ ಸ್ಕೈವರ್‌ಗೆ ಯುವ ಆಟಗಾರ್ತಿ ಫ್ರೆಯಾ ಕೆಂಪ್ ಉತ್ತಮ ಸಾಥ್ ನೀಡಿದರು. ಈ ಜೋಡಿಯು ಅತ್ಯುತ್ತಮವಾಗಿ ಬ್ಯಾಟ್ ಬೀಸಿ 55 ಎಸೆತಗಳಲ್ಲಿ 80 ರನ್‌ಗಳ ಭರ್ಜರಿ ಜೊತೆಯಾಟವನ್ನು ಕಟ್ಟಿದರು. ಫ್ರೆಯಾ ಕೆಂಪ್ ಕೇವಲ 28 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿ ಮಿಂಚಿದರೆ, ನಾಯಕಿ ನ್ಯಾಟ್ ಸ್ಕೈವರ್ 58 ರನ್ ಗಳಿಸಿ ಅಜೇಯರಾಗುಳಿದರು. ಇವರಿಬ್ಬರ ಈ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್ ತಂಡವು ಫೈನಲ್ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಇದನ್ನೂ ಓದಿ : ಮಹಿಳಾ ಟಿ20 ವಿಶ್ವಕಪ್ ಫೈನಲ್ : ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ದಾಖಲೆ ನಿರ್ಮಿಸಿದ ಬೆತ್ ಮೂನಿ!



















