ಮಂಡ್ಯ : ಮಂಡ್ಯ ಜಿಲ್ಲೆಗೆ ಮುಂಗಾರು ಮಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ (KRS) ಡ್ಯಾಂನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿತಗೊಂಡಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆಯ ಕೊರತೆ ಮುಂದುವರಿದಿರುವುದರಿಂದ ಡ್ಯಾಂಗೆ ಒಳಹರಿವು ಗಣನೀಯವಾಗಿ ಇಳಿಕೆಯಾಗಿದೆ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 82 ಅಡಿಗೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಲಭ್ಯ ಮಾಹಿತಿಯ ಪ್ರಕಾರ, ಡ್ಯಾಂನಲ್ಲಿ ಒಟ್ಟು ಸುಮಾರು 12 TMC ನೀರಿನ ಸಂಗ್ರಹವಿದ್ದು, ಅದರಲ್ಲಿ 4 TMC ಡೆಡ್ ಸ್ಟೋರೇಜ್ ಆಗಿರುವುದರಿಂದ ಕೇವಲ 8 TMC ಮಾತ್ರ ಬಳಕೆಗೆ ಲಭ್ಯವಾಗಿದೆ. ಪ್ರಸ್ತುತ ನೀರಿನ ಪ್ರಮಾಣವು ಕೇವಲ ಒಂದು ವಾರದ ಪೂರೈಕೆಗೆ ಮಾತ್ರ ಸಾಕಾಗುವ ಸ್ಥಿತಿಯಲ್ಲಿದೆ ಎಂದು ಅಂದಾಜಿಸಲಾಗಿದೆ.
ಇದರಿಂದ ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ವ್ಯಕ್ತವಾಗಿದೆ. ರೈತರು ಕೂಡ ಬೆಳೆ ಒಣಗುವ ಭೀತಿಯಲ್ಲಿ ಕಂಗಾಲಾಗಿದ್ದಾರೆ.
ಡ್ಯಾಂನ ಪ್ರಸ್ತುತ ವಿವರಗಳು:
- ಗರಿಷ್ಠ ನೀರಿನ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 82.76 ಅಡಿ
- ಒಳಹರಿವು: 70 ಕ್ಯೂಸೆಕ್
- ಹೊರಹರಿವು: 3655 ಕ್ಯೂಸೆಕ್
- ಒಟ್ಟು ಸಂಗ್ರಹ: 12.544 TMC
ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗದಿದ್ದರೆ ನೀರಿನ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.


















