ತಿರುವನಂತಪುರಂ: ಕೇರಳದ ತ್ರಿಶೂರ್ ರೈಲು ನಿಲ್ದಾಣದಲ್ಲಿ ಇಂದು ಭಾನುವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ನಿಲ್ದಾಣದ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ.
ಪ್ಲಾಟ್‌ಫಾರ್ಮ್ ಸಂಖ್ಯೆ 2ರ ಬಳಿ ಇರುವ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಅಗ್ನಿ ಅವಘಡದಿಂದ ಪ್ರಯಾಣಿಕರು ಮತ್ತು ಹತ್ತಿರದ ನಿವಾಸಿಗಳಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ಬೆಳಿಗ್ಗೆ 6:45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಪ್ರತಿದಿನ 500 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುವ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ.
ಪಾರ್ಕಿಂಗ್ ಮಾಡಿದ್ದ ವಾಹನಗಳಲ್ಲಿ ಇಂಧನ ಇದ್ದಿದ್ದರಿಂದ ಬೆಂಕಿ ವೇಗವಾಗಿ ಹಬ್ಬಿದೆ ಇದು ಅವಘಡದ ತೀವ್ರತೆಗೆ ಕಾರಣವಾಗಿದೆ. ಹಲವಾರು ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಕೆಲವು ವಾಹನಗಳಿಗೆ ಬಾಗಶಃ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹಾನಿಗೊಳಗಾದ ವಾಹನಗಳ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್, ಇಂಧನ ಸೋರಿಕೆ ಅಥವಾ ಬೇರೆ ಕಾರಣದಿಂದ ಈ ಅವಘಡ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ರೈಲ್ವೆ ನಿಲ್ದಾಣದ ಆವರಣದ ಸಿಸಿಟಿವಿ ದೃಶ್ಯಾವಳಿಗಳು ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.
ಪಾರ್ಕಿಂಗ್ ಪ್ರದೇಶವು ಗುರುವಾಯೂರಿಗೆ ಹೋಗುವ ರೈಲುಗಳು ಬಳಸುವ ಹಳಿಯ ಹತ್ತಿರದಲ್ಲಿದೆ. ಆದರೆ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ಬೆಂಕಿಯಿಂದ ರೈಲ್ವೆ ನಿಲ್ದಾಣದ ಮೂಲಸೌಕರ್ಯಗಳಿಗೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಈ ಘಟನೆಯಿಂದ ರೈಲು ಸಂಚಾರ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಇಂದೋರ್ ಬೆನ್ನಲ್ಲೇ ಗುಜರಾತ್‌ನ ಗಾಂಧಿನಗರದಲ್ಲಿ ಕಲುಷಿತ ನೀರಿನ ಭೀತಿ | 5 ದಿನದಲ್ಲಿ 100ಕ್ಕೂ ಹೆಚ್ಚು ಜನ ಅಸ್ವಸ್ಥ



















