ಮಂಗಳೂರು : ಮಂಗಳೂರಿನ ಪ್ರಸಿದ್ಧ ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್ ಮೂಲಕ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿ ವಸೂಲಿ ಮಾಡಿದ ಆರೋಪದ ಮೇಲೆ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಹಾಗೂ ಜಿತೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಆರಂಭವಾದ ಬ್ಲ್ಯಾಕ್‌ಮೇಲ್, ಬಳಿಕ ಸುಳ್ಳು ಆತ್ಮಹತ್ಯೆ ಕಥೆ, ಡೆತ್‌ನೋಟ್ ಮತ್ತು ಜೈಲು ಬೆದರಿಕೆಗಳವರೆಗೆ ತಲುಪಿದ್ದು, ಎರಡು ವರ್ಷಗಳ ಕಾಲ ಉದ್ಯಮಿಯಿಂದ ಕೋಟ್ಯಂತರ ರೂಪಾಯಿಯನ್ನು ಇಬ್ಬರು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.
2024ರಲ್ಲೇ ಜಿತೇಶ್ ಎಂಬಾತ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ. ಬಳಿಕ ಉದ್ಯಮಿಯ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ತನ್ನ ಬಳಿ ಇಟ್ಟುಕೊಂಡು, ಅವುಗಳನ್ನು ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ತೋರಿಸುವುದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಒತ್ತಾಯಿಸಿದ್ದ. ಮೊದಲ ಹಂತದಲ್ಲಿ 35 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ ಜಿತೇಶ್‌ಗೆ, ಮರ್ಯಾದೆ ಹಾಗೂ ಕುಟುಂಬದ ಗೌರವದ ಭಯದಿಂದ ಉದ್ಯಮಿ ಚೆಕ್ ಮೂಲಕ ಹಣ ನೀಡಿದ್ದರು.

ಆದರೆ, ಹಣ ಪಡೆದ ಬಳಿಕವೂ ಬ್ಲ್ಯಾಕ್‌ಮೇಲ್ ನಿಲ್ಲದೆ, ಜಿತೇಶ್ ನಿರಂತರವಾಗಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲು ಆರಂಭಿಸಿದ್ದಾನೆ. ಈ ಹಂತದಲ್ಲಿ ಉದ್ಯಮಿ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್‌ಗೆ ವಿಷಯ ತಿಳಿಸಿ ಸಹಾಯ ಕೇಳಿದ್ದ. ಆದರೆ ಸಹಾಯ ಮಾಡುವ ಬದಲು ನಿಝಾಮ್ ಜಿತೇಶ್ ಜೊತೆ ಕೈಜೋಡಿಸಿ ಉದ್ಯಮಿಯನ್ನು ಮತ್ತಷ್ಟು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಳಿಕ ನಿಝಾಮ್ ಹೊಸದೊಂದು ಕಥೆ ಸೃಷ್ಟಿಸಿ ಉದ್ಯಮಿಯಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2024ರ ಮೇ ತಿಂಗಳಲ್ಲಿ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಿಝಾಮ್ ಉದ್ಯಮಿಗೆ ನಂಬಿಸಿದ್ದ. ಜಿತೇಶ್ ಬರೆದಿದ್ದಾನೆ ಎನ್ನಲಾದ ಡೆತ್‌ನೋಟ್‌ನಲ್ಲಿ ಉದ್ಯಮಿಯ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿ ಭಾರೀ ಒತ್ತಡ ಹೇರುವ ಕೆಲಸ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಜಿತೇಶ್ ನೇಣಿಗೆ ಶರಣಾದ ರೀತಿಯ ಫೋಟೋಗಳು ಹಾಗೂ ಅಂತ್ಯಕ್ರಿಯೆಯ ಚಿತ್ರಗಳನ್ನು ತೋರಿಸಿ, ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಸುಳ್ಳು ಕಥೆಯನ್ನು ನಂಬಿದ ಉದ್ಯಮಿ ಭಯ ಮತ್ತು ಮರ್ಯಾದೆಯಿಂದ ನಿಝಾಮ್ ಕೇಳಿದಷ್ಟು ಹಣ ನೀಡುತ್ತಲೇ ಬಂದಿದ್ದಾರೆ. ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಹಾಗೂ ಪ್ರಕರಣದಿಂದ ಪಾರಾಗಲು ನಿರಂತರವಾಗಿ ಹಣ ನೀಡಿದ ಪರಿಣಾಮ, 2024ರಿಂದ 2026ರವರೆಗೆ ಒಟ್ಟು 2 ಕೋಟಿ 77 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಎರಡು ವರ್ಷಗಳ ಕಾಲ ನಡೆದ ಈ ಬ್ಲ್ಯಾಕ್‌ಮೇಲ್ ಜಾಲದಲ್ಲಿ ಉದ್ಯಮಿ ಸಂಪೂರ್ಣವಾಗಿ ಸಿಲುಕಿಕೊಂಡಿದ್ದರು.
ಆದರೆ, 2026ರ ಜೂನ್ ತಿಂಗಳಲ್ಲಿ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿಸಲಾಗಿದ್ದ ಜಿತೇಶ್, ಮಂಗಳೂರಿನಲ್ಲೇ ಉದ್ಯಮಿಗೆ ಜೀವಂತವಾಗಿ ಕಾಣಿಸಿಕೊಂಡಿದ್ದಾನೆ. ಇದರಿಂದ ಬೆಚ್ಚಿಬಿದ್ದ ಉದ್ಯಮಿ, ತಮಗೆ ದೊಡ್ಡ ಮಟ್ಟದ ವಂಚನೆ ನಡೆದಿರುವುದು ಅರಿತು ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉದ್ಯಮಿಯ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಉರ್ವಾ ಪೊಲೀಸರು ಜಿತೇಶ್ ಹಾಗೂ ನಿಝಾಮ್ ಅವರನ್ನು ಬಂಧಿಸಿದ್ದಾರೆ. ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್, ಸುಳ್ಳು ಆತ್ಮಹತ್ಯೆ ಕಥೆ ಹಾಗೂ ಕೋಟ್ಯಂತರ ರೂಪಾಯಿ ವಸೂಲಿ ಆರೋಪಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಇತ್ತ ಮಂಗಳೂರು ಯುವ ಕಾಂಗ್ರೆಸ್ ಮುಖಂಡನಾಗಿರುವ ನಿಝಾಮ್ ವಿವಿಧ ಕಾಂಗ್ರೆಸ್ ನಾಯಕರು ಹಾಗೂ ರಾಜ್ಯದ ಹಲವು ರಾಜಕೀಯ ಮುಖಂಡರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ : ಮೂರು ತಿಂಗಳು ತುಂಬುವ ಮುನ್ನವೇ 2,933 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ ಜಿಬಿಎ!


















