ನವದೆಹಲಿ : ಪಂಚರಾಜ್ಯಗಳ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬಿಜೆಪಿ ಇದೀಗ ಮುಂಬರುವ ಪ್ರಮುಖ ಚುನಾವಣಾ ಕದನಗಳನ್ನು ಎದುರಿಸಲು ಸಜ್ಜಾಗುತ್ತಿದ್ದು, ದೊಡ್ಡ ಮಟ್ಟದ ಸಾಂಸ್ಥಿಕ ಬದಲಾವಣೆಗೆ ಕೈಹಾಕಿದೆ. ಪಕ್ಷದ ನಾಯಕತ್ವವನ್ನು ಬಲಪಡಿಸುವ ಮತ್ತು ಪ್ರಾದೇಶಿಕ ಘಟಕಗಳ ನಡುವೆ ಉತ್ತಮ ಸಮನ್ವಯ ಸಾಧಿಸುವ ಉದ್ದೇಶದಿಂದ ದೆಹಲಿ, ಹರಿಯಾಣ, ಪಂಜಾಬ್ ಮತ್ತು ತ್ರಿಪುರಾ ರಾಜ್ಯಗಳಿಗೆ ಪಕ್ಷದ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಅನುಮೋದನೆಯೊಂದಿಗೆ ಈ ನೇಮಕಾತಿಗಳು ನಡೆದಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಪ್ರತ್ಯೇಕ ಅಧಿಸೂಚನೆಗಳ ಮೂಲಕ ಈ ಪ್ರಕಟಣೆ ಹೊರಡಿಸಿದ್ದಾರೆ. ಈ ಎಲ್ಲಾ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಅವರು ತಿಳಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಹೊಸ ರಾಜ್ಯಾಧ್ಯಕ್ಷರ ನೇಮಕ ಇನ್ನೂ ಆಗಿಲ್ಲ.
ದೆಹಲಿ ಚುಕ್ಕಾಣಿ ಹಿಡಿದ ಕೇಂದ್ರ ಸಚಿವ ಹರ್ಷ್ ಮಲ್ಹೋತ್ರಾ
ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ, ಹಾಲಿ ಕೇಂದ್ರ ಸರ್ಕಾರದಲ್ಲಿ ಕಾರ್ಪೊರೇಟ್ ವ್ಯವಹಾರಗಳು ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾಗಿರುವ ಹರ್ಷ್ ಮಲ್ಹೋತ್ರಾ ಅವರಿಗೆ ದೆಹಲಿ ಬಿಜೆಪಿ ಘಟಕದ ಸಾರಥ್ಯವನ್ನು ವಹಿಸಲಾಗಿದೆ. ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಇವರು ತಳಮಟ್ಟದ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಬದಲಿಗೆ ಕಣಕ್ಕಿಳಿದಿದ್ದ ಮಲ್ಹೋತ್ರಾ, ಭಾರಿ ಅಂತರದಿಂದ ಜಯಗಳಿಸಿದ್ದರು. ಈ ಹಿಂದೆ ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು 2015-16ರಲ್ಲಿ ಪೂರ್ವ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.
ಹರ್ಯಾಣ, ತ್ರಿಪುರಾ ಅಧ್ಯಕ್ಷರು ಯಾರು?
ಹರಿಯಾಣದಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದ ಪಾನಿಪತ್ ಮೂಲದ ಅರ್ಚನಾ ಗುಪ್ತಾ ಅವರನ್ನು ರಾಜ್ಯ ಘಟಕದ ನೂತನ ಅಧ್ಯಕ್ಷರನ್ನಾಗಿ ಬಡ್ತಿ ನೀಡಲಾಗಿದೆ. ಮತ್ತೊಂದೆಡೆ, ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಅಭಿಷೇಕ್ ದೆಬ್ರಾಯ್ ಅವರನ್ನು ಪಕ್ಷದ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರು 2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಹೈ-ಪ್ರೊಫೈಲ್ ಮಾತರ್ಬಾರಿ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 9,000ಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದರು.
ಪಂಜಾಬ್‌ನಲ್ಲಿ ಕೆವಲ್ ಸಿಂಗ್ ಧಿಲ್ಲೋನ್ ಅಧಿಪತ್ಯ
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮಾಜಿ ಶಾಸಕ ಕೆವಲ್ ಸಿಂಗ್ ಧಿಲ್ಲೋನ್ ಅವರನ್ನು ಪಂಜಾಬ್ ಬಿಜೆಪಿ ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಆಪ್ತರಾಗಿರುವ ಧಿಲ್ಲೋನ್, ದೀರ್ಘಕಾಲ ಕಾಂಗ್ರೆಸ್‌ನಲ್ಲಿದ್ದು 2022ರಲ್ಲಿ ಬಿಜೆಪಿ ಸೇರಿದ್ದರು. ಬರ್ನಾಲಾ ಕ್ಷೇತ್ರದಿಂದ ಸತತವಾಗಿ ಶಾಸಕರಾಗಿದ್ದ ಇವರು, ನಂತರದ ದಿನಗಳಲ್ಲಿ ಲೋಕಸಭೆ ಮತ್ತು ಉಪಚುನಾವಣೆಗಳನ್ನು ಎದುರಿಸಿದ ರಾಜಕೀಯ ಹಿನ್ನೆಲೆ ಹೊಂದಿದ್ದಾರೆ.
ಇದನ್ನೂ ಓದಿ : ಇರಾನ್ ಸೇನಾ ನೆಲೆಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ : ಇರಾನ್ ಡ್ರೋನ್‌ಗಳೂ ನಾಶ



















