ಬೆಂಗಳೂರು : ನಗರದ ನಾಗರಿಕ ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಏಕೀಕೃತ ಮೊಬೈಲ್ ಆ್ಯಪ್ ಹಾಗೂ ಒಂದೇ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ.
ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ನಗರದಲ್ಲಿರುವ ವಿವಿಧ ಇಲಾಖೆಗಳ ಸೇವೆಗಳು ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ಒಂದೇ ವೇದಿಕೆಯಲ್ಲಿ ಸ್ವೀಕರಿಸಿ, ಸಂಬಂಧಿತ ಇಲಾಖೆಗೆ ತಲುಪಿಸಿ ತ್ವರಿತವಾಗಿ ಪರಿಹಾರ ಕಲ್ಪಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಈ ಯೋಜನೆಯಡಿ ಬೆಸ್ಕಾಂ, ಬೆಂಗಳೂರು ಜಲಮಂಡಳಿ, ನಗರಪಾಲಿಕೆ, ಮೆಟ್ರೋ, ಪೊಲೀಸ್ ಇಲಾಖೆ, ಬಿಎಂಟಿಸಿ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ದೂರುಗಳನ್ನು ಒಂದೇ ಆ್ಯಪ್ ಹಾಗೂ ಒಂದೇ ಹೆಲ್ಪ್‌ಲೈನ್ ಸಂಖ್ಯೆಯ ಮೂಲಕ ದಾಖಲಿಸಬಹುದಾಗಿದೆ. ಪ್ರಸ್ತುತ ಪ್ರತಿಯೊಂದು ಇಲಾಖೆಗೆ ಪ್ರತ್ಯೇಕ ಸಹಾಯವಾಣಿ ಸಂಖ್ಯೆ ಇರುವುದರಿಂದ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿದ್ದಾರೆ. ಕೆಲವೊಮ್ಮೆ ತಪ್ಪು ಇಲಾಖೆಗೆ ಕರೆ ಮಾಡಿದರೆ ಮಾಹಿತಿ ಸಂಬಂಧಿತ ಇಲಾಖೆಗೆ ತಲುಪದೇ ಸಮಸ್ಯೆ ಪರಿಹಾರ ವಿಳಂಬವಾಗುತ್ತಿದೆ. ಈ ತೊಂದರೆಯನ್ನು ನಿವಾರಿಸಲು ಏಕೀಕೃತ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಇದಕ್ಕಾಗಿ ಜಿಬಿಎ ಕೇಂದ್ರ ಕಚೇರಿಯಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಸ್ಥಾಪಿಸಿ, ಅಲ್ಲಿಂದಲೇ ವಿವಿಧ ಇಲಾಖೆಗಳ ಸಹಾಯವಾಣಿ ಮತ್ತು ದೂರು ನಿರ್ವಹಣೆಯನ್ನು ನಡೆಸುವ ಯೋಜನೆ ರೂಪಿಸಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ಬೆಂಗಳೂರಿನ ನಾಗರಿಕರು ಒಂದೇ ಸಂಖ್ಯೆ ಅಥವಾ ಒಂದೇ ಆ್ಯಪ್ ಮೂಲಕ ತಮ್ಮ ಸಮಸ್ಯೆಗಳನ್ನು ದಾಖಲಿಸಿ, ವಿವಿಧ ಇಲಾಖೆಗಳ ಸೇವೆಯನ್ನು ಸುಲಭವಾಗಿ ಪಡೆಯುವಂತಾಗಲಿದೆ. ಸಾರ್ವಜನಿಕ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಆಡಳಿತವನ್ನು ಇನ್ನಷ್ಟು ಜನಸ್ನೇಹಿಯಾಗಿಸುವುದು ಜಿಬಿಎ ಉದ್ದೇಶವಾಗಿದೆ.
ಇದನ್ನೂ ಓದಿ : ನಗರದ ಕಸ ವಿಲೇವಾರಿಗೆ ಸುಪ್ರೀಂ ಬ್ರೇಕ್ : ಅ.27ರಿಂದ ಲ್ಯಾಂಡ್‌ಫಿಲ್‌ಗೆ ಮಿಶ್ರ ತ್ಯಾಜ್ಯ ಕಳುಹಿಸುವಂತಿಲ್ಲ!


















