ಬೆಂಗಳೂರು : ಬೈ ಎಲೆಕ್ಷನ್ ಫಲಿತಾಂಶದತ್ತ ಕಣ್ಣಿಟ್ಟಿರುವ ರಾಜ್ಯ ರಾಜಕೀಯದಲ್ಲಿ ಈಗ ಹೊಸ ಚರ್ಚೆ ಆರಂಭವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಕಮಲ ಪಡೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾತುಕತೆ ಜೋರಾಗುವ ಲಕ್ಷಣಗಳು ಕಾಣಿಸುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಾಯಕತ್ವ ಇದೀಗ ಪರೀಕ್ಷೆಗೆ ಒಳಪಟ್ಟಿದೆ. ಈ ಹಿಂದೆ ನಡೆದ ಹಲವು ಉಪಚುನಾವಣೆಗಳಲ್ಲಿ ಸೋಲು ಕಂಡಿರುವ ಹಿನ್ನೆಲೆ, ಈ ಬಾರಿ ಫಲಿತಾಂಶ ಅವರ ರಾಜಕೀಯ ಭವಿಷ್ಯಕ್ಕೂ ಮಹತ್ವ ಪಡೆದುಕೊಂಡಿದೆ.
ಇದೀಗ ನಡೆದಿರುವ ಎರಡು ಬೈ ಎಲೆಕ್ಷನ್ ಕ್ಷೇತ್ರಗಳು ಈಗಾಗಲೇ ಕಾಂಗ್ರೆಸ್ ಹಿಡಿತದಲ್ಲಿರುವುದರಿಂದ, ಸೋಲು ಕಂಡರೂ ಬಿಜೆಪಿ ನೇರವಾಗಿ ಏನನ್ನೂ ಕಳೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ಪಕ್ಷದೊಳಗೆ ಕೇಳಿಬರುತ್ತಿದೆ. ಆದರೂ ಈ ಚುನಾವಣೆ ಪಕ್ಷ ಸಂಘಟನೆ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಮುಂದಿನ 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಬೈ ಎಲೆಕ್ಷನ್‌ಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.
ಎರಡೂ ಕ್ಷೇತ್ರಗಳಲ್ಲಿ ಅಥವಾ ಕನಿಷ್ಠ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದರೆ ಅದು ವಿಜಯೇಂದ್ರ ಅವರ ನಾಯಕತ್ವಕ್ಕೆ ದೊಡ್ಡ ಪ್ಲಸ್ ಆಗಲಿದೆ. ಈ ಹಿನ್ನೆಲೆ ಅವರು ಭರ್ಜರಿ ಪ್ರಚಾರ ನಡೆಸಿ ಗೆಲುವಿಗಾಗಿ ಶ್ರಮಿಸಿದ್ದಾರೆ.
ಇನ್ನೊಂದೆಡೆ, ಎರಡು ಕ್ಷೇತ್ರಗಳಲ್ಲೂ ಹೀನಾಯ ಸೋಲು ಕಂಡರೆ ವಿಜಯೇಂದ್ರ ಅವರ ಸ್ಥಾನಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ಫಲಿತಾಂಶವನ್ನು ಬಳಸಿಕೊಂಡು ಪಕ್ಷದೊಳಗಿನ ರೆಬಲ್ ಬಣ ಮತ್ತೆ ಸಕ್ರಿಯವಾಗುವ ಸಾಧ್ಯತೆ ಹೆಚ್ಚಾಗಿದೆ.
ಚುನಾವಣೆಯ ಸಮಯದಲ್ಲಿ ಒಗ್ಗಟ್ಟು ತೋರಿದ ರೆಬಲ್ ನಾಯಕರು, ಫಲಿತಾಂಶ ವಿರೋಧವಾಗಿ ಬಂದರೆ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ವರಿಷ್ಠರ ಮುಂದೆ ದೂರು ನೀಡುವ ಸಾಧ್ಯತೆ ಇದೆ.
ಒಟ್ಟಾರೆ, ಬೈ ಎಲೆಕ್ಷನ್ ಫಲಿತಾಂಶ ಬಿಜೆಪಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುವ ಸೂಚನೆ ನೀಡುತ್ತಿದ್ದು, ವಿಜಯೇಂದ್ರ ಅವರ ನಾಯಕತ್ವದ ಭವಿಷ್ಯವನ್ನು ನಿರ್ಧರಿಸಲಿದೆ.
ಇದನ್ನೂ ಓದಿ : ಕಾವೇರಿ ನದಿಯಲ್ಲಿ ಮುಳುಗಿ 6 ಜನ ಸಾವು – ದರ್ಗಾಕ್ಕೆ ಬಂದವರ ದುರಂತ ಅಂತ್ಯ



















