ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕಳೆದ 452 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ಬೈರಮಂಗಲ ಭಾಗದ ರೈತರಿಗೆ ಬೆಂಬಲ ಸೂಚಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷವು “ಬಿಡದಿ–ಬೈರಮಂಗಲ ಚಲೋ” ಕಾರ್ಯಕ್ರಮದ ಅಂಗವಾಗಿ ಇಂದು ಬೆಂಗಳೂರಿನ ಕೆಂಗೇರಿಯಿಂದ ಬೃಹತ್ ಬೈಕ್ ಜಾಥಾವನ್ನು ಆಯೋಜಿಸಿತ್ತು. ಜಾಥಾವು ಬಿಡದಿ ಸರ್ಕಲ್ ಮೂಲಕ ಬೈರಮಂಗಲ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಚರಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು, ಈ ಭಾಗದ ರೈತ ಮಹಿಳೆಯರು ಹೈನುಗಾರಿಕೆ ಹಾಗೂ ರೇಷ್ಮೆ ಉತ್ಪಾದನೆ ಸೇರಿದಂತೆ ಕೃಷಿ ಆಧಾರಿತ ಜೀವನೋಪಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿಗೆ ಈ ಹೋರಾಟ ಆರಂಭವಾಗಿ 452ನೇ ದಿನಕ್ಕೆ ಕಾಲಿಟ್ಟಿದ್ದು, ಇದು ಸಣ್ಣ ವಿಷಯವಲ್ಲ. ಈ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳುವವರೆಗೆ ಪ್ರತಿಭಟನೆ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುತ್ತೇನೆ ಎಂದು ಸರ್ಕಾರ ಸ್ಪಷ್ಟವಾಗಿ ಘೋಷಿಸುವವರೆಗೆ ಹೋರಾಟ ತೀವ್ರಗೊಳ್ಳಬೇಕು ಮತ್ತು ಅಗತ್ಯವಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವಂತಹ ಹೋರಾಟ ರೂಪಿಸಬೇಕೆಂದು ರವಿ ಕೃಷ್ಣಾರೆಡ್ಡಿ ಅವರು ಕರೆ ನೀಡಿದ್ದಾರೆ. ರಾಜ್ಯದ ಇತರ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಕನ್ನಡಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಿ ಬೈರಮಂಗಲ ರೈತರಿಗೆ ಬಲ ನೀಡಬೇಕು ಎಂದು ರವಿ ಕೃಷ್ಣಾರೆಡ್ಡಿ ಅವರು ಮನವಿ ಮಾಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಯನ್ನು ಮುಂದುವರಿಸುವ ಕುರಿತು ನೀಡಿದ್ದ ಹೇಳಿಕೆಗಳು ರೈತರಲ್ಲಿ ಆತಂಕ ಮೂಡಿಸಿವೆ. ಈಗ ಅವರು ಮುಖ್ಯಮಂತ್ರಿ ಸ್ಥಾನದಲ್ಲಿರುವುದರಿಂದ, ತಮ್ಮ ಹಳೆಯ ನಿಲುವನ್ನು ಮರುಪರಿಶೀಲಿಸಿ ರೈತರ ಹಿತದೃಷ್ಟಿಯಿಂದ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ ಪ್ರಾಥಮಿಕ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು,” ಎಂದು ಆಗ್ರಹಿಸಿದ್ದಾರೆ.
ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ಲಕ್ಷಾಂತರ ಮರಗಳು ನಾಶವಾಗುವ ಸಾಧ್ಯತೆ ಇದೆ ಹಾಗೂ ಇಂದು ಹಸಿರಿನಿಂದ ಕಂಗೊಳಿಸುತ್ತಿರುವ ಬೈರಮಂಗಲ ಪ್ರದೇಶ ಬಂಜರು ಭೂಮಿಯಾಗಿ ಮಾರ್ಪಡುವ ಅಪಾಯವಿದೆ ಎಂದು ರವಿ ಕೃಷ್ಣಾರೆಡ್ಡಿ ಅವರು ಎಚ್ಚರಿಸಿದ್ದು, ತೆಂಗು, ಅಡಿಕೆ, ಬಾಳೆ, ತರಕಾರಿ ಹಾಗೂ ವಿವಿಧ ಹಣ್ಣುಗಳನ್ನು ಬೆಳೆಯುತ್ತಿರುವ ಭೂಮಿಯನ್ನು ಬಂಜರು ಎಂದು ಬಿಂಬಿಸುವ ಸರ್ಕಾರದ ಪ್ರಯತ್ನವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಭೂ ದಾಖಲೆಗಳಲ್ಲಿ ಯಾವುದೇ ರೀತಿಯ ತಪ್ಪು ಅಥವಾ ತಿದ್ದುಪಡಿ ನಡೆದಿದ್ದರೆ ಅದನ್ನು ಕೂಡಲೇ ಸರಿಪಡಿಸಬೇಕು ಮತ್ತು ಸರ್ಕಾರ ಕೂಡಲೇ ಪ್ರಾಥಮಿಕ ಅಧಿಸೂಚನೆಯನ್ನು ರದ್ದುಗೊಳಿಸಿ ರೈತರ ಭೂಮಿಯನ್ನು ರೈತರಿಗೆ ಬಿಟ್ಟುಕೊಡಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದ್ದಾರೆ.
ಬೈಕ್ ಜಾಥಾದ ಮಧ್ಯದಲ್ಲಿ ರೈತರ ಜಮೀನಿಗೆ ಇಳಿದ ರವಿ ಕೃಷ್ಣಾರೆಡ್ಡಿ ಅವರು, ನೇಗಿಲನ್ನು ಹಿಡಿದು ಸಾಂಕೇತಿಕವಾಗಿ ಭೂಮಿಯನ್ನು ಉಳುಮೆಯನ್ನೂ ಮಾಡಿದ್ದಾರೆ. ಈ ಮೂಲಕ ಸರ್ಕಾರ ಸುಳ್ಳು ಹೇಳುತ್ತಿರುವಂತೆ ಇದು ಯಾವುದೇ ಕಾರಣಕ್ಕೂ ಬಂಜರು ಭೂಮಿಯಲ್ಲ, ಬದಲಾಗಿ ತೆಂಗು, ಅಡಿಕೆ, ರೇಷ್ಮೆಯಂತಹ ಬೆಳೆಗಳನ್ನು ಬೆಳೆಯುತ್ತಿರುವ ಅತ್ಯಂತ ಫಲವತ್ತಾದ ಕೃಷಿ ಭೂಮಿ ಎಂದು ರಾಜ್ಯದ ಜನತೆಗೆ ಹಾಗೂ ಸರ್ಕಾರಕ್ಕೆ ಸ್ಪಷ್ಟವಾದ ಸಂದೇಶ ರವಾನಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷರಾದ ದೀಪಕ್ ಸಿ.ಎನ್. ಅವರು, “ಇಂದಿನ ಸರ್ಕಾರಗಳು ರೈತರ ಹಿತ ಕಾಯುವ ಬದಲು, ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳಲು ಸಂಚು ರೂಪಿಸುತ್ತಿವೆ. ಬಿಡದಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ರೈತರ ಜಮೀನಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ರೈತರು ತಮ್ಮ ತಾಯಿ ಸಮಾನವಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಅವರ ಈ ನ್ಯಾಯಯುತ ಹೋರಾಟಕ್ಕೆ ಕೆಆರ್‌ಎಸ್ ಪಕ್ಷ ಸದಾ ಬೆನ್ನೆಲುಬಾಗಿ ನಿಲ್ಲಲಿದೆ,” ಎಂದು ಘೋಷಿಸಿದ್ದಾರೆ.
ಬೃಹತ್ ಬೈಕ್ ಜಾಥಾವು ಕೆಂಗೇರಿಯಿಂದ ಬಿಡದಿ ಸರ್ಕಲ್ ತಲುಪಿದಾಗ ಧರಣಿ ನಿರತ ರೈತರು ಕೂಡ ಜಾಥಾಕ್ಕೆ ಸೇರ್ಪಡೆಯಾಗಿದ್ದಾರೆ. ನಂತರ ಜಾಥಾವು ಬೈರಮಂಗಲ, ಕೆಮ್ಮಶೆಟ್ಟಿದೊಡ್ಡಿ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಹೊಸೂರು, ಬನ್ನಿಗಿರಿ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಸಂಚರಿಸಿತು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ, ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಎಲ್. ಜೀವನ್, ಉಪಾಧ್ಯಕ್ಷರುಗಳಾದ ಮಂಜುನಾಥ ಎಸ್., ಸೋಮಸುಂದರ್, ಬೈರಮಂಗಲ ರೈತ ಹೋರಾಟಗಾರರಾದ ನಾಗರಾಜ್, ರಾಮಣ್ಣ ಹಾಗೂ ನೂರಾರು ರೈತರು ಭಾಗವಹಿಸಿದ್ದರು.
ಇದನ್ನೂ ಓದಿ : ಬೆಂಗಳೂರಿನ ವೈದ್ಯನ ಮನೆಯಲ್ಲಿ ಅಪರೂಪದ ವನ್ಯಜೀವಿಗಳು ಪತ್ತೆ – ಕೋಟ್ಯಂತರ ಮೌಲ್ಯದ ಆಮೆ, ಊಸರವಳ್ಳಿ ವಶಕ್ಕೆ!


















